ನವದೆಹಲಿ: ಆಮ್ ಆದ್ಮಿ ಪಕ್ಷದ ಮಾಜಿ ನಾಯಕಿ ಮತ್ತು ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು ಮಂಗಳವಾರ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಲಿವಾಲ್, ನಾವು ಯಾವುದೇ ಒತ್ತಡದಿಂದಲೂ ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ಕೇಸರಿ ಪಕ್ಷದ ಕೆಲಸಗಳಿಂದ ಪ್ರೇರಿತಳಾಗಿದ್ದೇನೆ ಎಂದು ಹೇಳಿದ್ದಾರೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ಅನುಭವವನ್ನು ನೆನಪಿಸಿಕೊಂಡ ಸ್ವಾತಿ, ಬಿಜೆಪಿಯಿಂದ ಪಡೆದ ಬೆಂಬಲವನ್ನು ಶ್ಲಾಘಿಸಿದರು.
"ನಾನು ಯಾವುದೇ ಒತ್ತಡದಿಂದ ಬಿಜೆಪಿ ಸೇರಿಲ್ಲ. ನಾನು ಹಲವು ವರ್ಷಗಳಿಂದ ಬಿಜೆಪಿಯ ಕೆಲಸದಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ನಾನು ದೆಹಲಿ ಮಹಿಳಾ ಆಯೋಗದಲ್ಲಿ ಕೆಲಸ ಮಾಡುವಾಗ ಸಂಪೂರ್ಣ ತಟಸ್ಥ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದರು.
ಬಿಜೆಪಿ ಕಡೆಯಿಂದ ನನಗೆ ಸಾಕಷ್ಟು ಬೆಂಬಲವೂ ಸಿಕ್ಕಿದೆ. ಆದ್ದರಿಂದ ಇಂದು ನಾನು ತುಂಬಾ ಭಾವುಕಳಾಗಿದ್ದೇನೆ. ಇದು ನನಗೆ ಬಹಳ ಮುಖ್ಯ ಮತ್ತು ಮಹತ್ವದ ದಿನ. ನಾನು ದೇವರಿಗೆ ತುಂಬಾ ಕೃತಜ್ಞಳಾಗಿದ್ದೇನೆ. ಇಡೀ ಬಿಜೆಪಿ ನಾಯಕತ್ವಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಮತ್ತು ಈಗ ನಾನು ದೆಹಲಿಗಾಗಿ ಪೂರ್ಣ ಹೃದಯದಿಂದ ಕೆಲಸ ಮಾಡುತ್ತೇನೆ" ಎಂದು ಬಿಜೆಪಿ ಸೇರಿದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಎಎಪಿ ಮತ್ತು ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸ್ವಾತಿ ಮಲಿವಾಲ್ ಅವರು, ಕಳೆದ 10 ವರ್ಷಗಳಲ್ಲಿ ಅವರು ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಹರಡಿದ್ದಾರೆ ಎಂದು ಆರೋಪಿಸಿದರು.