ಮುಂಬೈ: ಗುರು ಪೂರ್ಣಿಮೆಯ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದಗಳನ್ನು ಇಬ್ಬರು ವ್ಯಕ್ತಿಗಳು ತೊಳೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಬಿಜೆಪಿ ಇದನ್ನು "ಕಾಂಗ್ರೆಸ್ ಸಂಸ್ಕೃತಿ" ಎಂದು ಲೇವಡಿ ಮಾಡಿದೆ. ಆದರೆ, ತಮ್ಮ ಪಾದಗಳನ್ನು ಸ್ಪರ್ಶಿಸುತ್ತಿದ್ದವರು ತಮ್ಮ 'ಕುಟುಂಬ'ದ ಯುವ ಸದಸ್ಯರು ಎಂದು ಪಟೋಲೆ ಸ್ಪಷ್ಟಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಪಟೋಲೆ ಸೋಫಾದಲ್ಲಿ ಕುಳಿತಿರುವಾಗ ಇಬ್ಬರು ವ್ಯಕ್ತಿಗಳು ಅವರ ಪಾದಗಳನ್ನು ತೊಳೆಯುತ್ತಿರುವುದು ಮತ್ತು ಅವರ ಮೇಲೆ ಹಾಗೂ ಪಾದಗಳ ಮೇಲೆ ಹೂವುಗಳನ್ನು ಸುರಿಸುತ್ತಿರುವುದು ಕಂಡುಬರುತ್ತದೆ. ಅವರ ಪಾದಗಳ ಬಳಿ ಕೆಲವು ಹಣ್ಣುಗಳನ್ನು ಸಹ ಇರಿಸಿರುವುದನ್ನು ವಿಡಿಯೋ ತೋರಿಸುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಮಹಾರಾಷ್ಟ್ರ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥರೂ ಹಾಗೂ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದ ಪಟೋಲೆ ಅವರನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಇದು "ಕಾಂಗ್ರೆಸ್ ನಾಯಕರ ಸಂಸ್ಕೃತಿಯನ್ನು" ಪ್ರತಿಬಿಂಬಿಸುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಾಂಗ್ರೆಸ್ ನಾಯಕರ ಸಂಸ್ಕೃತಿ ಎಂದು ರಾಜ್ಯ ಸಚಿವರು ಮತ್ತು ಬಿಜೆಪಿ ನಾಯಕರಾದ ಚಂದ್ರಶೇಖರ್ ಬವನ್‌ಕುಲೆ ವಾಗ್ದಾಳಿ ನಡೆಸಿದ್ದಾರೆ.
ಆದರೆ, ಪಟೋಲೆ ಈ ವಿಷಯದ ಕುರಿತಾದ ವಿವಾದವನ್ನು ತಳ್ಳಿಹಾಕಿದ್ದಾರೆ. ಅಂತಹ ಯಾವುದೇ ಆಚರಣೆಯನ್ನು ಮಾಡಲು ಯಾರನ್ನೂ ಕೇಳಿಲ್ಲ ಅಥವಾ ಒತ್ತಾಯಿಸಿಲ್ಲ ಎಂದು ಪ್ರತಿಪಾದಿಸಿದರು. "ಅಂದು ಗುರು ಪೂಜೆ ಇತ್ತು. ನನ್ನ ಕುಟುಂಬದ ಇಬ್ಬರು ಕಿರಿಯ ಸದಸ್ಯರು ಅಲ್ಲಿ ಉಪಸ್ಥಿತರಿದ್ದರು. ಅವರು ನನ್ನನ್ನು ತಮ್ಮ ಗುರು ಎಂದು ಪರಿಗಣಿಸುವುದರಿಂದ, ಗೌರವದ ಸಂಕೇತವಾಗಿ ಇದನ್ನು ಮಾಡಲು ಬಯಸಿದ್ದರು," ಎಂದು ಅವರು ಹೇಳಿದರು.
ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಇತರರಿಗೆ ಉಪದೇಶ ನೀಡುವ ಹಕ್ಕು ಬಿಜೆಪಿಗೆ ಇಲ್ಲ. ರಾಮ ಮಂದಿರದ ದೇಣಿಗೆ ನಿಧಿಯ ಕಳ್ಳತನದ ಘಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, "ದೇಣಿಗೆ ನಿಧಿಯನ್ನು ಲೂಟಿ ಮಾಡುವವರು ನಮಗೆ ಸಲಹೆ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.