ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಳೆದ ತಿಂಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ಗುಂಪನ್ನು ಭೇಟಿಯಾದ ನಂತರ ಲೋಕಸಭೆಯ ವಿರೋಧ ಪಕ್ಷದ ನಾಯಕ ಈ ಹೇಳಿಕೆ ನೀಡಿದ್ದಾರೆ.
ಜುಲೈ 20 ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
"ನಾನು ವಿವಿಧ ರಾಜ್ಯಗಳ ಯುವ ಪ್ರತಿಭಟನಾಕಾರರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಸಂವಿಧಾನ, ಶಿಕ್ಷಣ ವ್ಯವಸ್ಥೆ ಹಾಗೂ ಭಾರತದ ಭವಿಷ್ಯಕ್ಕಾಗಿ ಅವರು ಹೋರಾಡಿದ ಸಾವಿರಾರು ವಿದ್ಯಾರ್ಥಿಗಳ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ವಿದ್ಯಾರ್ಥಿಗಳು ತಮ್ಮ ಮೇಲೆ ಹೇಗೆ ಹಲ್ಲೆ ನಡೆಯಿತು, ಹೇಗೆ ಥಳಿಸಲಾಗಿದೆ ಮತ್ತು ಬೆದರಿಕೆ ಹಾಕಲಾಯಿತು ಎಂದು ಅವರು ನನಗೆ ತಿಳಿಸಿದರು. ಅವರು ಸಂವಿಧಾನವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದ ಕಲ್ಪನೆ ಮತ್ತು ಭಾರತದ ಭವಿಷ್ಯವನ್ನು ರಕ್ಷಿಸಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸುವುದು ಅಪರಾಧವಲ್ಲ ಎಂದ ರಾಹುಲ್ ಗಾಂಧಿ, ವಿದ್ಯಾರ್ಥಿಗಳು ಹಿಂಸಾಚಾರ ಬಯಸುತ್ತಿಲ್ಲ, ಬದಲಾಗಿ ಸುಧಾರಣೆ ಬಯಸುತ್ತಿದ್ದಾರೆ ಎಂದು ವಾದಿಸಿದರು.
ಇದೇ ವೇಳೆ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವರೇ ಕಾರಣ ಎಂದು ನೇರವಾಗಿ ಆರೋಪಿಸಿದರು.
"ಈ ಯುವತಿಯ ಮೇಲೆ ಪೆಲೆಟ್ ಗನ್ ಹಾರಿಸಿದ ವ್ಯಕ್ತಿ, ಕೆಲವು ದಿನಗಳ ಹಿಂದೆ ನಾನು ಮಾಧ್ಯಮದ ಮುಂದೆ ಕರೆತಂದ ಯುವಕನ ಮೇಲೆ ಪೆಲೆಟ್ ಗನ್ ಹಾರಿಸಿದ ವ್ಯಕ್ತಿ, ಈ ಯುವತಿಯ ವಿರುದ್ಧ ಪೊಲೀಸ್ ಪಡೆಯನ್ನು ತಿರುಗಿಸಿದ ವ್ಯಕ್ತಿ ಅಮಿತ್ ಶಾ ಮತ್ತು ಅವರು ಈ ದೇಶದ ಗೃಹ ಸಚಿವರು" ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
"ಅವರು(ಶಾ) ಅಪರಾಧಿ ಪ್ರಜ್ಞೆಯಿಂದ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಸಂಸತ್ತಿಗೆ ಬರುವ ಧೈರ್ಯ ಇಲ್ಲ. ಏನಾಯಿತು ಎಂಬುದರ ಕುರಿತು ಪ್ರತಿಕ್ರಿಯಿಸುವ ಸಭ್ಯತೆ ಅಥವಾ ಧೈರ್ಯ ಎರಡೂ ಇಲ್ಲ ಎಂದರು.