ತಂದೆಯ ಅಂತ್ಯಕ್ರಿಯೆಗೆ ಮೂವರು ಪುತ್ರಿಯರು ಗೈರು; ವಿಡಿಯೊ ಕರೆ ಮೂಲಕವೇ ಅಂತಿಮ ಸಂಸ್ಕಾರ ವೀಕ್ಷಣೆ 
ದೇಶ

ವೃದ್ಧಾಶ್ರಮದಲ್ಲಿ ತಂದೆ ಸಾವು; 5,100 ರೂ.ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಅಂತ್ಯಕ್ರಿಯೆ ವೀಕ್ಷಿಸಿದ ಮೂವರು ಪುತ್ರಿಯರು-Video

ಮುಂಬೈ ಮೂಲದ ಮಾಜಿ ಜವಳಿ ವ್ಯಾಪಾರಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ, ಕಳೆದ ಒಂದೂವರೆ ವರ್ಷಗಳಿಂದ ಸೋನಿಪತ್‌ನ ಪಶ್ಚಿಮ ರಾಮ್ ನಗರದಲ್ಲಿರುವ ಸಮಾಜ ಕಲ್ಯಾಣ ಶಿಕ್ಷಣ ಸಮಿತಿ ನಡೆಸುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು.

ಸೋನಿಪತ್: ತಮ್ಮ ಮೂವರು ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಿ, ಜೀವನದಲ್ಲಿ ನೆಲೆಗೊಳಿಸಲು ಬದುಕನ್ನೇ ಮುಡಿಪಾಗಿಟ್ಟಿದ್ದ ತಂದೆಯೊಬ್ಬರು ಹರಿಯಾಣದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಅಂತ್ಯಕ್ರಿಯೆಗೆ ಮೂವರು ಪುತ್ರಿಯರೂ ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಬದಲಿಗೆ ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಿಂದ ವಿಡಿಯೊ ಕರೆ ಮೂಲಕ ತಂದೆಯ ಅಂತಿಮ ಸಂಸ್ಕಾರವನ್ನು ವೀಕ್ಷಿಸಿದರು.

ಮುಂಬೈ ಮೂಲದ ಮಾಜಿ ಜವಳಿ ವ್ಯಾಪಾರಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ, ಕಳೆದ ಒಂದೂವರೆ ವರ್ಷಗಳಿಂದ ಸೋನಿಪತ್‌ನ ಪಶ್ಚಿಮ ರಾಮ್ ನಗರದಲ್ಲಿರುವ ಸಮಾಜ ಕಲ್ಯಾಣ ಶಿಕ್ಷಣ ಸಮಿತಿ ನಡೆಸುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಮೀನಾ ಅವರೊಂದಿಗೆ ಇದ್ದರು. ಆದರೆ ಅವರು ಈ ಹಿಂದೆ ನಿಧನರಾಗಿದ್ದರು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗುಪ್ತಾ ಅವರು ಮೊನ್ನೆ ಮಂಗಳವಾರ ಬೆಳಗಿನ ಜಾವ ಸುಮಾರು 3.30ಕ್ಕೆ ನಿಧನರಾದರು. ಬಳಿಕ ವೃದ್ಧಾಶ್ರಮದ ಆಡಳಿತ ಮಂಡಳಿ ಅವರ ಮೂವರು ಪುತ್ರಿಯರನ್ನು ಸಂಪರ್ಕಿಸಿತು.

ವಿಡಿಯೊ ಕರೆಯಲ್ಲೇ ಅಂತಿಮ ಸಂಸ್ಕಾರ

ಪುತ್ರಿಯರು ಸೋನಿಪತ್‌ಗೆ ಬಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಪುತ್ರಿಯರು ವಿಡಿಯೊ ಕರೆ ಮೂಲಕ ತಂದೆಯ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದರು.

ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್, ಗುಪ್ತಾ ಅವರು ವೃದ್ಧಾಶ್ರಮದಲ್ಲಿದ್ದ ಮೊಬೈಲ್‌ ಫೋನ್ ಮೂಲಕ ಪುತ್ರಿಯರೊಂದಿಗೆ ಆಗಾಗ ಮಾತನಾಡುತ್ತಿದ್ದರು. ಆದರೆ ಅವರು ಅನಾರೋಗ್ಯಕ್ಕೆ ತುತ್ತಾದ ನಂತರ ಕರೆಗಳು ಕಡಿಮೆಯಾಗಿದ್ದವು.

ಸುಮಾರು 20 ದಿನಗಳ ಹಿಂದೆಯೇ ಅವರ ಆರೋಗ್ಯ ಹದಗೆಟ್ಟಿರುವ ಬಗ್ಗೆ ಪುತ್ರಿಯರಿಗೆ ತಿಳಿಸಿದ್ದೆವು. ಆದರೂ ಅವರು ನೋಡಲು ಬರಲಿಲ್ಲ ಎಂದು ಆನಂದ್ ಕುಮಾರ್ ಹೇಳಿದ್ದಾರೆ.

ಗುಪ್ತಾ ನಿಧನರಾದ ನಂತರವೂ ಪುತ್ರಿಯರನ್ನು ಸಂಪರ್ಕಿಸಿ, ಅವರು ಸೋನಿಪತ್‌ಗೆ ಬಂದರೆ ಅಗತ್ಯ ವ್ಯವಸ್ಥೆ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ತಮಗೆ ಸಮಯವಿಲ್ಲ ಎಂದು ಹೆಣ್ಣುಮಕ್ಕಳು ತಿಳಿಸಿದ್ದರೆಂದು ಕುಮಾರ್ ಹೇಳಿದ್ದಾರೆ.

5,100 ರೂ ಕಳುಹಿಸಿ ಅಂತ್ಯಕ್ರಿಯೆಗೆ ಮನವಿ

ನೇಪಾಳದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಹಿರಿಯ ಪುತ್ರಿ ಅನಿತಾ ಅವರು ಆನ್‌ಲೈನ್ ಮೂಲಕ 5,100 ರೂಪಾಯಿ ಕಳುಹಿಸಿ, ತಂದೆಯ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ನೆರವೇರಿಸುವಂತೆ ವೃದ್ಧಾಶ್ರಮದವರಿಗೆ ಮನವಿ ಮಾಡಿದರು.

ಅಂತ್ಯಕ್ರಿಯೆ ಮುಗಿದ ಬಳಿಕ ಅದರ ವಿಡಿಯೊವನ್ನು ಕಳುಹಿಸುವಂತೆ ಪುತ್ರಿಯರು ಕೇಳಿಕೊಂಡಿದ್ದಾರೆ. ವಿಡಿಯೊ ಕರೆಯ ವೇಳೆ ಒಬ್ಬ ಪುತ್ರಿ "ಇನ್ನೆಷ್ಟು ಸಮಯ ಆಗುತ್ತದೆ? ನಮಗೆ ಊಟ ಮಾಡಿ ಸ್ನಾನಕ್ಕೂ ಹೋಗಬೇಕಿದೆ," ಎಂದು ಹೇಳಿರುವುದು ಕೇಳಿಬಂದಿದೆ.

ಮೂವರು ಪುತ್ರಿಯರಿಗೂ ಉತ್ತಮ ಶಿಕ್ಷಣ ನೀಡಿದ್ದ ತಂದೆ

ಗುಪ್ತಾ ಅವರು ತಮ್ಮ ಮೂವರು ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಲು ಜೀವನವನ್ನೇ ಸಮರ್ಪಿಸಿದ್ದರು ಎಂದು ವೃದ್ಧಾಶ್ರಮದ ಆಡಳಿತ ತಿಳಿಸಿದೆ. ಅವರಲ್ಲಿ ಇಬ್ಬರು ಶಿಕ್ಷಕಿಯರಾಗಿದ್ದಾರೆ.

ಹಿರಿಯ ಪುತ್ರಿ ಅನಿತಾ ನೇಪಾಳದಲ್ಲಿ, ಎರಡನೇ ಪುತ್ರಿ ನಿಶಾ ಉತ್ತರ ಪ್ರದೇಶದ ಆಜಂಘಢದಲ್ಲಿ ಹಾಗೂ ಕಿರಿಯ ಪುತ್ರಿ ಪ್ರಿಯಾ ಮುಂಬೈನಲ್ಲಿ ವಾಸವಾಗಿದ್ದಾರೆ. ಮೂವರೂ ವಿವಾಹಿತರಾಗಿದ್ದು, ತಮ್ಮದೇ ಕುಟುಂಬ ಹೊಂದಿದ್ದಾರೆ.

ಮೊದಲು ಗುಪ್ತಾ ಅವರ ಅಸ್ಥಿಗಳನ್ನು ಕಾಯ್ದಿರಿಸುವಂತೆ ಕುಟುಂಬ ಸದಸ್ಯರು ಕೇಳಿಕೊಂಡಿದ್ದರು. ನಂತರ ಸೋನಿಪತ್‌ಗೆ ಬರಲು ಸಮಯವಿಲ್ಲ ಎಂದು ತಿಳಿಸಿ, ಅಸ್ಥಿಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸುವಂತೆ ವೃದ್ಧಾಶ್ರಮದವರಿಗೆ ಮನವಿ ಮಾಡಿದ್ದಾರೆ.

ಮರಣಾನಂತರ ನೇತ್ರದಾನ

ಗುಪ್ತಾ ಅವರ ಕುಟುಂಬದ ಇಚ್ಛೆಯಂತೆ, ಅವರ ಮರಣಾನಂತರ ನೇತ್ರದಾನ ಕೂಡ ಮಾಡಲಾಗಿದೆ. ಇದರಿಂದ ಅವರ ಕಣ್ಣುಗಳು ದೃಷ್ಟಿಹೀನರಿಗೆ ಬೆಳಕು ನೀಡಲಿವೆ. ಕೊನೆಗೆ, ವೃದ್ಧಾಶ್ರಮದ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳೇ ಗುಪ್ತಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಪ್ರಧಾನಿ ಮೋದಿಗೆ ಅಷ್ಟೊಂದು ತಲೆಬಾಗಬೇಡಿ": Instagram ಖಾತೆ ನಿರ್ಬಂಧ ಬೆನ್ನಲ್ಲೇ Meta ವಿರುದ್ಧ ಕೇಜ್ರಿವಾಲ್ ಆಕ್ರೋಶ..!

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ