ಚೆನ್ನೈ (ತಮಿಳುನಾಡು): ದೇವಾಲಯದೊಳಗೆ ದೇವರ ವಿಗ್ರಹದ ಚಿತ್ರ ತೆಗೆಯುತ್ತಾ ಬೇರೆಯವರಗ ದರ್ಶನಕ್ಕೆ ತೊಂದರೆ ಉಂಟುಮಾಡುವ ಪ್ರಕರಣಗಳು ಹೆಚ್ಚಾದ ಕಾರಣ, ತಮಿಳುನಾಡು ಸರ್ಕಾರವು ರಾಜ್ಯದ ಎಲ್ಲಾ ದೇವಾಲಯಗಳ ಆವರಣದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಸೆಪ್ಟೆಂಬರ್ 1 ರಿಂದ ನಿಷೇಧ!
ಇತ್ತೀಚಿನ ದಿನಗಳಲ್ಲಿ ಅನೇಕ ದೇವಾಲಯಗಳ ಗರ್ಭಗುಡಿ ಹಾಗೂ ದೇವರ ವಿಗ್ರಹಗಳ ದೃಶ್ಯಗಳನ್ನು ಮೊಬೈಲ್ ಮೂಲಕ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಇದು ದೇವಾಲಯಗಳ ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆ ತರುತ್ತಿದೆ ಎಂದು ಸೆಪ್ಟೆಂಬರ್ 1 ರಿಂದ ಸಂಪೂರ್ಣವಾಗಿ ನಿಷೇಧಿಸಿ ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಹೊಸ ನಿಯಮ ಜಾರಿ ಮಾಡಿದೆ. ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್ ದೇವಾಲಯಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಆದೇಶ ನೀಡಿತ್ತು.
ಮುಂದುವರೆದು, ರಾಜ್ಯಸರ್ಕಾರವು ಸೆಪ್ಟೆಂಬರ್ 1 ರ ಒಳಗಾಗಿ ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳ ಪ್ರವೇಶ ದ್ವಾರ ಅಥವಾ ಪಾದರಕ್ಷೆ ಇಡುವ ಜಾಗದ ಬಳಿ ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿ ಇಡಲು ಪ್ರತ್ಯೇಕ ಕೌಂಟರ್‌ಗಳನ್ನು ನಿರ್ಮಿಸಲಾಗುವುದು. ಈ ವೇಳೆ ಭಕ್ತರು ತಮ್ಮ ಫೋನ್‌ಗಳನ್ನು ಇಲ್ಲಿ ಜಮಾವಣೆ ಮಾಡಲು ಪ್ರತಿ ಮೊಬೈಲ್‌ಗೆ ಕೇವಲ ₹5 ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು, ಫೋನ್ ಪಡೆದ ತಕ್ಷಣ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಮೂಲಕ ಭಕ್ತರಿಗೆ ಅಧಿಕೃತ ರಸೀದಿಯನ್ನು ನೀಡಲಾಗುತ್ತದೆ. ಅದರಂತೆ, ದರ್ಶನ ಮುಗಿದ ತರುವಾಯೂ ಈ ರಸೀದಿ ತೋರಿಸಿ ಫೋನ್ ಮರಳಿ ಪಡೆಯಬಹುದು.
ಏತನ್ಮಧ್ಯೆ, ವಿಜಯ್ ಸರ್ಕಾರದ ಈ ನಿಯಮವು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಅದರಂತೆ, ಪ್ರಮುಖ ರಾಜಕಾರಣಿಗಳು, ಚಲನಚಿತ್ರ ನಟ-ನಟಿಯರು ಅಥವಾ ಪ್ರಭಾವಿ ವ್ಯಕ್ತಿಗಳು ದೇವಾಲಯಕ್ಕೆ ಭೇಟಿ ನೀಡಿದಾಗಲೂ ಅವರ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ.