ಮುಂಬೈ: ಹಿಂದಿ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಹೆಸರುವಾಸಿಯಾದ ರೂಪದರ್ಶಿ ಮತ್ತು ನಟಿ ಅಂತರಾ ಬ್ಯಾನರ್ಜಿ ಈಗ ಸುದ್ದಿಯಲ್ಲಿದ್ದಾರೆ.
ರೈಲಿನ ಎಸಿ ಬೋಗಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡೆಲ್ ಹಾಗೂ ವೆಬ್‌ಸಿರೀಸ್ ನಟಿ ಅಂತರಾ ಬ್ಯಾನರ್ಜಿ ಅವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ
ಅಂತರಾ ಬ್ಯಾನರ್ಜಿ ಶೂಟಿಂಗ್‌ಗಾಗಿ ಸೂರತ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘರ್ಷಣೆ ಸಂಭವಿಸಿದೆ. ಈ ಘಟನೆ ಬೊರಿವಲಿ ಮತ್ತು ದಹನು ನಡುವೆ, ರಾತ್ರಿ ಸುಮಾರು 9:30 ರಿಂದ 10:50 ರ ನಡುವೆ ನಡೆದಿದೆ. ಪ್ರಯಾಣಿಕರೊಬ್ಬರು ಅಂತರಾ ಬ್ಯಾನರ್ಜಿ ಅವರ ಟಿಕೆಟ್ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ವಿವಾದ ಪ್ರಾರಂಭವಾಯಿತು.
ಅವರು ಕಾಯ್ದಿರಿಸಿದ ಸೀಟನ್ನು ಖಾಲಿ ಮಾಡುವಂತೆ ಕೇಳಲಾಯಿತು. ನಂತರ ಟಿಕೆಟ್ ಸಂಗ್ರಾಹಕ ಹರಿಕೇಶ್ ತ್ರಿಪಾಠಿ ಮತ್ತು ಆರ್‌ಪಿಎಫ್ ಸಿಬ್ಬಂದಿಯನ್ನು ಕರೆಯಲಾಯಿತು. ಆರ್‌ಪಿಎಫ್ ಅಧಿಕಾರಿಗಳು ಯಾಮಿನಿಕಾಂತ್ ಮಿಶ್ರಾ ಮತ್ತು ರಾಜೇಶ್ ಕುಮಾರ್ ಮಧ್ಯಪ್ರವೇಶಿಸಿದರು. ಅಂತರಾ ಬ್ಯಾನರ್ಜಿ ಅಧಿಕಾರಿಗಳ ವಿರುದ್ಧ ಕೆಟ್ಟ ಮಾತುಗಳನ್ನು ಬಳಸಿದ ನಂತರ ವಿವಾದ ತೀವ್ರವಾಯಿತು, ನಟಿ ರೇಜರ್ ಬ್ಲೇಡ್ ತೋರಿಸಿದ್ದಳು. ಯಾಮಿನಿಕಾಂತ್ ಮಿಶ್ರಾ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ
ಅಂತರಾ ಬ್ಯಾನರ್ಜಿ ತಾನೇ ಗಾಯ ಮಾಡಿಕೊಂಡು ಹೊರಹೋಗಲು ಪ್ರಯತ್ನಿಸುತ್ತಾ ಕೋಚ್‌ನ ಕಿಟಕಿಯನ್ನು ಮುರಿಯಲು ಪ್ರಯತ್ನಿಸಿದಳು ಎಂದು ಆರೋಪಿಸಲಾಗಿದೆ. ಕೊನೆಗೆ ಅವಳನ್ನು ದಹನುವಿನಲ್ಲಿ ಇಳಿಸಿ ರೈಲ್ವೆ ಪೊಲೀಸರಿಗೆ ಒಪ್ಪಿಸಲಾಯಿತು. ಮರುದಿನ ಬೆಳಿಗ್ಗೆ ಬೊರಿವಲಿ ರೈಲ್ವೆ ಪೊಲೀಸರು ಅವಳನ್ನು ವಶಕ್ಕೆ ಪಡೆದರು.ಆಗಸ್ಟ್ 13 ರಂದು ಎಫ್‌ಐಆರ್ ದಾಖಲಾಗಿದೆ.
ಹಲ್ಲೆಯ ವೇಳೆ ತನ್ನ ಸಮವಸ್ತ್ರ ಹಾಗೂ ಮೊಬೈಲ್ ಫೋನ್‌ಗೂ ಹಾನಿಯಾಗಿದೆ ಎಂದು ಆರ್‌ಪಿಎಫ್ ಅಧಿಕಾರಿ ಮಿಶ್ರಾ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯಿಂದ ಕೋಚ್‌ನಲ್ಲಿದ್ದ ಇತರ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು ಎನ್ನಲಾಗಿದೆ.