ಮುಂಬೈ: ಮಹಾರಾಷ್ಟ್ರದ ಸಂಭಾಜಿನಗರದ ಬೆಟ್ಟದ ಮೇಲಿಂದ ಬಿದ್ದು ತಂದೆ-ತಾಯಿ-ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಒಂದಿಡೀ ಕುಟುಂಬದ ದುರಂತ ಅಂತ್ಯಕ್ಕೆ ಐಫೋನ್ ಸಾಲ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.
ಹೌದು.. ದುಬಾರಿ iPhone ಖರೀದಿಸಿ ಅದರ ಕಂತು (EMI) ಪಾವತಿಸಲು ಹಣದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಉಂಟಾದ ಜಗಳ ಕೊನೆಗೆ ಭೀಕರ ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ. 18 ವರ್ಷದ ಯುವಕನನ್ನು ಮನವೊಲಿಸಲು ತೆರಳಿದ್ದ ಆತನ ತಂದೆ-ತಾಯಿಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದರೂ, ಸುರಕ್ಷತಾ ಜಾಲವನ್ನು ಏಕೆ ಅಳವಡಿಸಲು ಸಾಧ್ಯವಾಗಲಿಲ್ಲ ಎಂಬುದು ಸ್ಪಷ್ಟವಾಗಿಲ್ಲ.
ಆರಂಭದಲ್ಲಿ ಯುವಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನುವ ವರದಿಗಳು ಬಂದಿದ್ದರೂ, ಈ ಕುರಿತು ಪೊಲೀಸರು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕುಟುಂಬದೊಳಗಿನ ವಿವಾದದ ಇತರ ವಿವರಗಳ ಬಗ್ಗೆಯೂ ತನಿಖೆ ಮುಂದುವರಿದಿದೆ.
ಐಫೋನ್ EMI 'ಮಹಾ' ದುರಂತ
ಕುನಾಲ್ ಎಂಬ 18 ವರ್ಷದ ಯುವಕ ಇತ್ತೀಚೆಗೆ iPhone ಖರೀದಿಸಿದ್ದ. ಆದರೆ ಅದರ ಇಎಂಐ (ಕಂತು)ಗಳನ್ನು ಪಾವತಿಸಲು ಆತನಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರ ಬಳಿ ಹಣ ಕೇಳುತ್ತಿದ್ದ. ಇತ್ತೀಚಿನ EMI ಪಾವತಿ ವಿಚಾರವಾಗಿ ತಂದೆ ಮುರಳೀಧರ್ ಚಾಂದ್ಗುಡೆ ಅವರೊಂದಿಗೆ ಕುನಾಲ್‌ಗೆ ತೀವ್ರ ವಾಗ್ವಾದ ನಡೆದಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಗಳದ ಬಳಿಕ ಕುನಾಲ್ ಮನೆಯಿಂದ ಹೊರಟು ಛತ್ರಪತಿ ಸಂಭಾಜಿನಗರದ ತಿಸ್ಗಾಂವ್ ಪ್ರದೇಶದ ಬೆಟ್ಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಈ ಪ್ರದೇಶ ವಾಲುಜ್ MIDC ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.
ಮೂರು ಗಂಟೆಗಳ ಕಾಲ ಮನವೊಲಿಸಲು ಪ್ರಯತ್ನ
ಕುನಾಲ್ ಬೆಟ್ಟದ ತುದಿಯಲ್ಲಿರುವುದನ್ನು ತಿಳಿದ ಆತನ ತಂದೆ-ತಾಯಿ ಕೂಡ ಅಲ್ಲಿಗೆ ತೆರಳಿದ್ದರು. ಸ್ಥಳೀಯರು ಮತ್ತು ಪೊಲೀಸರು ಸೇರಿದಂತೆ ಹಲವರು ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಮನವೊಲಿಸಲು ಪ್ರಯತ್ನಿಸಿದರು. ತಿಸ್ಗಾಂವ್ ಗ್ರಾಮದ ಮಾಜಿ ಸರಪಂಚ್ ಸಂಜಯ್ ಜಾಧವ್ ಕೂಡ ಕುನಾಲ್‌ನೊಂದಿಗೆ ಮಾತನಾಡಲು ಪ್ರಯತ್ನಿಸಿದ್ದರು.
“ನಿನ್ನ ತಾಯಿಗಾಗಿ ಬದುಕು” ಎಂದು ಒಬ್ಬರು ಮನವಿ ಮಾಡುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಆದರೆ ಕುನಾಲ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಸಿದ್ಧನಾಗಿರಲಿಲ್ಲ ಎನ್ನಲಾಗಿದೆ. ಸ್ಥಳೀಯರು ಆತನಿಗೆ iPhone 15 Pro ಕೊಡಿಸುವುದಾಗಿಯೂ ಭರವಸೆ ನೀಡಿದ್ದರು. ಆದರೂ ಕುನಾಲ್ ಕೆಳಗೆ ಬರಲು ಒಪ್ಪಲಿಲ್ಲ ಎಂದು ಜಾಧವ್ ತಿಳಿಸಿದ್ದಾರೆ.
“ನಾವು ಸಾಕಷ್ಟು ಮನವಿ ಮಾಡಿದೆವು. ನಿನ್ನ ತಾಯಿಯ ಬಗ್ಗೆ ಯೋಚಿಸು, ಹೀಗೆ ಮಾಡಬೇಡ, ನೀನು ವಿದ್ಯಾವಂತನಾಗಿದ್ದೀಯ, ನಿನ್ನ ಮುಂದೆ ಭವಿಷ್ಯವಿದೆ ಎಂದು ಹೇಳಿದೆವು. ಸಾಧ್ಯವಿರುವ ಎಲ್ಲ ರೀತಿಯಲ್ಲೂ ಮನವೊಲಿಸಲು ಪ್ರಯತ್ನಿಸಿದೆವು” ಎಂದು ಜಾಧವ್ ಹೇಳಿದ್ದಾರೆ.
ಮಗನನ್ನು ತಡೆಯಲು ಹೋದ ತಂದೆ
ಸುಮಾರು ಮಧ್ಯಾಹ್ನ 1 ಗಂಟೆ ವೇಳೆಗೆ, ಸುಮಾರು ಮೂರು ಗಂಟೆಗಳ ಮನವೊಲಿಕೆಯ ಬಳಿಕ, ಕುನಾಲ್‌ನ ತಂದೆ ಮುರಳೀಧರ್ ಅವರು ಮಗನಿದ್ದ ಸ್ಥಳದವರೆಗೆ ತೆರಳಿ ಆತನನ್ನು ಹಿಂದಕ್ಕೆ ಕರೆತರಲು ಪ್ರಯತ್ನಿಸಿದ್ದಾರೆ. ಈ ವೇಳೆ ತಂದೆ ಮಗನನ್ನು ತಡೆಯಲು ಮುಂದಾದರು.
ಆದರೆ ತಂದೆ ಮತ್ತು ಮಗ ಇಬ್ಬರೂ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಈ ದೃಶ್ಯವನ್ನು ನೋಡಿದ ತಾಯಿ ಸಂಗೀತಾ ಕೆಲವೇ ಕ್ಷಣಗಳ ಬಳಿಕ ಬೆಟ್ಟದಿಂದ ಕೆಳಗೆ ಹಾರಿದ್ದು, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು, ಪ್ರವಾಸಿಗರ ಸಮ್ಮುಖದಲ್ಲೇ ದುರಂತ
ಹಲವಾರು ಗಂಟೆಗಳ ಕಾಲ ನಡೆದ ಈ ಘಟನೆಗೆ ಸ್ಥಳೀಯರು ಮತ್ತು ಪ್ರವಾಸಿಗರು ಸಾಕ್ಷಿಯಾಗಿದ್ದರು. ಕುನಾಲ್‌ನನ್ನು ಮನವೊಲಿಸಲು ನಡೆಸಿದ ಪ್ರಯತ್ನಗಳ ಕೆಲವು ದೃಶ್ಯಗಳು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಪೊಲೀಸರು ಮೂವರ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.