ಭುವನೇಶ್ವರ: ಒಡಿಶಾದ ಪಾರದೀಪ್ ಕರಾವಳಿಯ ಆಳ ಸಮುದ್ರದಲ್ಲಿ ಶನಿವಾರ ಭೀಕರ ನೌಕಾ ದುರಂತ ಸಂಭವಿಸಿದೆ. ಸಿಂಗಾಪುರಕ್ಕೆ ಹೊರಟಿದ್ದ ಪನಾಮ ದೇಶದ ಧ್ವಜದ 'ಎಮ್‌ವಿ ಓಷನ್ ವಿನ್ನರ್' (MV Ocean Winner) ಹೆಸರಿನ ದೈತ್ಯ ಸರಕು ಹಡಗು ಬಂಗಾಳ ಕೊಲ್ಲಿಯಲ್ಲಿ ಮುಳುಗಡೆಯಾಗಿದೆ.
24 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಪನಾಮಾ ಧ್ವಜದ ಸರಕು ಸಾಗಣೆ ಹಡಗು ಶನಿವಾರ ಒಡಿಶಾ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲು ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂವಿ ಓಷನ್ ವಿನ್ನರ್ ಹೆಸರಿನ ಈ ಹಡಗು ಒಡಿಶಾದಿಂದ ಸಿಂಗಾಪುರಕ್ಕೆ 72,100 ಟನ್ ಕಬ್ಬಿಣದ ಅದಿರನ್ನು ಸಾಗಿಸುತ್ತಿತ್ತು. ಆಗಸ್ಟ್ 20ರಂದು ರಾತ್ರಿ 10.42ರ ಸುಮಾರಿಗೆ ಪಾರಾದೀಪ್ ಬಂದರಿನಿಂದ ಹಡಗು ಹೊರಟಿತ್ತು.
ಹಡಗಿನಲ್ಲಿದ್ದ 24 ಸಿಬ್ಬಂದಿಯಲ್ಲಿ 20 ಮಂದಿ ಚೀನಾ, ಮೂವರು ಮ್ಯಾನ್ಮಾರ್ ಹಾಗೂ ಒಬ್ಬರು ಬಾಂಗ್ಲಾದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿಯ ರಕ್ಷಣೆಗೆ ಭಾರತೀಯ ಕರಾವಳಿ ಪಡೆ (ICG) ಹಾಗೂ ಭಾರತೀಯ ನೌಕಾಪಡೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಈವರೆಗೆ ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನೂ 22 ಮಂದಿ ನಾಪತ್ತೆಯಾಗಿದ್ದಾರೆ.
ಹಡಗಿನೊಂದಿಗೆ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಶೋಧ ಮತ್ತು ರಕ್ಷಣಾ ನೆರವು ಕೋರಿ ಹಡಗು ನಿರ್ವಹಣೆಗೆ ಸಂಬಂಧಿಸಿದ ಕಂಪನಿಯೊಂದು ಬೆಳಗ್ಗೆ 11.48ರ ಸುಮಾರಿಗೆ ಶ್ರೀ ವಿಜಯಪುರಂನಲ್ಲಿರುವ ಭಾರತೀಯ ಕರಾವಳಿ ಪಡೆಯ ಸಾಗರ ರಕ್ಷಣಾ ಸಮನ್ವಯ ಕೇಂದ್ರಕ್ಕೆ (MRCC) ಮಾಹಿತಿ ನೀಡಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ MRCC, ಸಮೀಪದಲ್ಲಿದ್ದ MT ಐಸೋಪೋಸ್ ಎಂಬ ವಾಣಿಜ್ಯ ಹಡಗನ್ನು ಶೋಧ ಕಾರ್ಯಕ್ಕೆ ನಿಯೋಜಿಸಿತು. ಹಡಗು ಅಥವಾ ರಕ್ಷಣಾ ತೆಪ್ಪಗಳನ್ನು ಹುಡುಕಿ ನೆರವು ನೀಡುವಂತೆ ಸೂಚಿಸಲಾಗಿತ್ತು.
ರಾತ್ರಿ 8ರ ಸುಮಾರಿಗೆ ಎರಡು ರಕ್ಷಣಾ ತೆಪ್ಪಗಳಿಂದ ಇಬ್ಬರು ಬದುಕುಳಿದವರನ್ನು MT ಐಸೋಪೋಸ್ ಸಿಬ್ಬಂದಿ ರಕ್ಷಿಸಿದರು ಎಂದು ಕರಾವಳಿ ಪಡೆ ತಿಳಿಸಿದೆ.
ಶೋಧ ಕಾರ್ಯಾಚರಣೆಗೆ ಭಾರತೀಯ ಕರಾವಳಿ ಪಡೆ ಮೂರು ಹಡಗುಗಳನ್ನು ನಿಯೋಜಿಸಿದೆ. ICG ವರದ್ ಮತ್ತು ಅನ್ಮೋಲ್ ಹಡಗುಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾರ್ಯಾಚರಣೆಗೆ ಹೆಚ್ಚುವರಿ ನೆರವು ನೀಡಲು ವಿಜಿತ್ ಹಡಗನ್ನು ವಿಜಯಪುರಂನಿಂದ ಕಳುಹಿಸಲಾಗಿದೆ.
ಹಡಗಿನ ಕೊನೆಯ ಬಂದರು ಪಾರಾದೀಪ್ ಆಗಿದ್ದು, ಮುಂದಿನ ಗಮ್ಯ ಬಂದರು ಸಿಂಗಾಪುರವಾಗಿತ್ತು ಎಂದು ICG ತಿಳಿಸಿದೆ.
ಪಾರಾದೀಪ್‌ನಿಂದ ಹೊರಟ ಸುಮಾರು ಎರಡು ದಿನಗಳ ಬಳಿಕ ಹಡಗು ಟ್ರ್ಯಾಕಿಂಗ್ ವ್ಯವಸ್ಥೆಯಿಂದ ನಾಪತ್ತೆಯಾಗಿತ್ತು. ಇದರಿಂದ ತಾಂತ್ರಿಕ ದೋಷ, ತುರ್ತು ಪರಿಸ್ಥಿತಿ ಅಥವಾ ಇತರ ಯಾವುದೇ ಅವಘಡ ಸಂಭವಿಸಿರಬಹುದೆಂಬ ಆತಂಕ ವ್ಯಕ್ತವಾಗಿತ್ತು.
ಪಾರಾದೀಪ್ ಬಂದರು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಹಡಗು ಪಾರಾದೀಪ್‌ನಿಂದ ಸುಮಾರು 290 ನಾಟಿಕಲ್ ಮೈಲು ದೂರ ಸಾಗಿದ್ದು, ಬಂದರಿನ ಟ್ರ್ಯಾಕಿಂಗ್ ವ್ಯಾಪ್ತಿಯನ್ನು ದಾಟಿರಬಹುದು ಎಂದು ಹೇಳಲಾಗಿತ್ತು.
ಹಡಗಿನ ಟ್ರ್ಯಾಕಿಂಗ್ ಸಿಗ್ನಲ್ ಕಳೆದುಹೋಗಲು ತಾಂತ್ರಿಕ ದೋಷ, ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ನಿಷ್ಕ್ರಿಯಗೊಂಡಿರುವುದು ಅಥವಾ ಯಾವುದೇ ತುರ್ತು ಪರಿಸ್ಥಿತಿ ಕಾರಣವೇ ಎಂಬುದನ್ನು ಪರಿಶೀಲಿಸಲು ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭಾರತೀಯ ಕರಾವಳಿ ಪಡೆ ತಿಳಿಸಿದೆ.