ಚೆನ್ನೈ: ತಮಿಳುನಾಡು ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಅವರನ್ನೇ ಹೋಲುವ ಶಾರ್ಟ್ ಡ್ರೆಸ್ ನಲ್ಲಿರುವ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ತೀವ್ರ ಟೀಕೆಗಳು ಕೇಳಿಬರುತ್ತಿವೆ. ಅದರಲ್ಲೂ ಪ್ರತಿಪಕ್ಷ ಡಿಎಂಕೆ ಬೆಂಬಲಿಗರು ಈ ವಿಡಿಯೋವನ್ನು ಅಸ್ತ್ರವಾಗಿಟ್ಟುಕೊಂಡು ಟಿವಿಕೆ ಹಾಗೂ ಸಚಿವೆ ಕೀರ್ತನಾ ವಿರುದ್ಧ ತೀವ್ರ ಟೀಕೆ ಮಾಡುತ್ತಿದ್ದಾರೆ.
ಈ ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಶಿವಕಾಶಿಯ ಚೊಚ್ಚಲ ಶಾಸಕರಾಗಿರುವ ಕೀರ್ತಿನಾ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ತಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವವರ ಹಿಂದಿರುವ ದುರ್ಬಲ ಹಾಗೂ ಸಂಕುಚಿತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ನನಗೆ ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಮಹಿಳೆಯರ ವಿರುದ್ಧ ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಇತಿಹಾಸವಿರುವ ನಾಯಕನ ಅನುಯಾಯಿಗಳಿಂದ ಬೇರೇನನ್ನಾದರೂ ನಿರೀಕ್ಷಿಸಲು ಸಾಧ್ಯ?ಎಂದು ಉದಯನಿಧಿ ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸ್ಪಷ್ಟನೆಗಾಗಿ ಹೇಳುತ್ತಿದ್ದೇನೆ ಆ ವಿಡಿಯೋದಲ್ಲಿರುವ ಮಹಿಳೆ ನಾನಲ್ಲ. ಒಂದು ವೇಳೆ ನಾನೇ ಆಗಿದ್ದರೂ, ಅದರಿಂದೇನು ಸಮಸ್ಯೆ? ಮಹಿಳೆಯ ಉಡುಪು, ನೋಟ ಅಥವಾ ಸಂತೋಷವನ್ನು ಏಕೆ ಇನ್ನೂ ಸಾರ್ವಜನಿಕ ವಿಚಾರಣೆಯ ವಿಷಯಗಳನ್ನಾಗಿ ಪರಿಗಣಿಸಲಾಗುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ.
ನೀತಿಗಳು, ಆಡಳಿತ ಅಥವಾ ಸಾಧನೆಗಳ ವಿಷಯದಲ್ಲಿ ಟಿವಿಕೆ ಪಕ್ಷವನ್ನು ಪ್ರಶ್ನಿಸಲು ಸಾಧ್ಯವಾಗದಿದ್ದಾಗ, ಡಿಎಂಕೆಯವರು ಇಂತಹ ಕಥೆಗಳನ್ನು ಸೃಷ್ಟಿಸುವ ಮಾರ್ಗ ಹಿಡಿದಿದ್ದಾರೆ."ಸಕಾರಾತ್ಮಕವಾಗಿ ಕೊಡುಗೆ ನೀಡಲು ಏನೂ ಇಲ್ಲದವರ ಅತ್ಯಂತ ಹಳೆಯ ಅಸ್ತ್ರವೇ ಸ್ತ್ರೀದ್ವೇಷ ಎಂದು ಹೇಳಿರುವ ಕೀರ್ತನಾ, ವಿಡಿಯೋದಲ್ಲಿರುವ ಮಹಿಳೆಗೆ ಸಮಾಧಾನ ವ್ಯಕ್ತಪಡಿಸಿದರು. ತಮ್ಮೊಂದಿಗಿನ ಹೋಲಿಕೆಯಿಂದಾಗಿ ಆ ಮಹಿಳೆ ಅನಗತ್ಯವಾಗಿ ಟ್ರೋಲ್ ಆಗಿದ್ದಕ್ಕೆ ಕ್ಷಮೆಯಾಚಿಸಿದ ಅವರು, ತಮ್ಮದೇ ಆದ ನಿಯಮಗಳ ಪ್ರಕಾರ ಜೀವನವನ್ನು ಮುಂದುವರಿಸುವಂತೆ ಆಕೆಯನ್ನು ಹುರಿದುಂಬಿಸಿದ್ದಾರೆ.
ಈ ಮಧ್ಯೆ ವಿಡಿಯೋದಲ್ಲಿರುವುದು ತಮಿಳುನಾಡು ಸಚಿವೆ ಅಲ್ಲ, ನಾನು ಎಂದು ಮಲೇಷ್ಯಾದ ಮಹಿಳೆ ವಿನೋಶಾ ರವಿ ಹೇಳಿದ್ದಾರೆ. ಇನ್ಸಾಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಅವರು ಪೋಸ್ಟ್ ಮಾಡಿದ್ದು, ನೋವಿನಿಂದ ಹೇಳುತ್ತಿದ್ದೇನೆ. ಡ್ರೆಸಿನ ಬಗ್ಗೆ ಪ್ರಶ್ನಿಸಿರುವ ಮಹಿಳೆ ತಮಿಳುನಾಡು ಸಚಿವೆ ಅಲ್ಲ. ಅದು ನಾನು. ಈ ವಿಚಾರವಾಗಿ ಮಲೇಷ್ಯಾ ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಕೆಲಸಕ್ಕೆ ಹೋಗುವಾಗಿ ಹಾಗೆಯೇ ಕಾರಿನಿಂದ ಕೆಳಗೆ ಇಳಿದಾಗ ಯಾರೂ ನನ್ನ ಗಮನಕ್ಕೆ ತರದೇ ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.