ಲಖನೌ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ನಾಪತ್ತೆಯಾದವರ ಕೆಲ ಶವಗಳು ಇದೀಗ ಉತ್ತರ ಪ್ರದೇಶಕ್ಕೂ ನದಿಯಲ್ಲಿ ಕೊಚ್ಚಿಕೊಂಡು ಬಂದಿದ್ದು, ಇಂದು ಅಧಿಕಾರಿಗಳು 3 ಶವಗಳನ್ನು ಹೊರತೆಗೆದಿದ್ದಾರೆ.
ಹೌದು.. ಪ್ರವಾಹಪೀಡಿತ ನೇಪಾಳದಿಂದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಬಂದಿರುವ ಶಂಕೆಯಿರುವ ಮೂರು ಮೃತದೇಹಗಳು, ಇಬ್ಬರು ಮಹಿಳೆಯರ ಶವಗಳು ಸೇರಿದಂತೆ, ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಗಂಡಕ್ ನದಿಯಲ್ಲಿ ಗುರುವಾರ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಡಕ್ ನದಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗಾ ವಹಿಸುತ್ತಿದ್ದ ಸಶಸ್ತ್ರ ಸೀಮಾ ಬಲ (SSB) ತಂಡಕ್ಕೆ ನೀರಿನ ಭಾರಿ ಸೆಳೆತದಲ್ಲಿ ಮೃತದೇಹಗಳು ತೇಲಿ ಬರುತ್ತಿರುವುದು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ SSB ಸಿಬ್ಬಂದಿ ಮೋಟಾರ್ ಬೋಟ್ ಬಳಸಿ ಮೂರು ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ. ಬಳಿಕ ಮೃತದೇಹಗಳನ್ನು ಜಿಲ್ಲಾ ಕೇಂದ್ರದಲ್ಲಿರುವ ಶವಾಗಾರಕ್ಕೆ ರವಾನಿಸಲಾಗಿದೆ.
ಮೃತರ ಗುರುತು ಪತ್ತೆಯಾಗಿಲ್ಲ
ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ಗುರುತು ಖಚಿತಪಡಿಸಿಕೊಳ್ಳಲು ಅಗತ್ಯ ಪ್ರಕ್ರಿಯೆಗಳನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಅದೇ ವೇಳೆ, SSB ಹಾಗೂ ಜಿಲ್ಲಾ ಆಡಳಿತ ಅಧಿಕಾರಿಗಳು ನೇಪಾಳದ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮೃತರ ಕುಟುಂಬಸ್ಥರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
150 ಕಿ.ಮೀ ಕೊಚ್ಚಿಬಂದ ಶವಗಳು!
ಮೂಲಗಳ ಪ್ರಕಾರ, ನೇಪಾಳದಲ್ಲಿ ಸಂಭವಿಸಿದ ಫ್ಲ್ಯಾಶ್ ಫ್ಲಡ್‌ನ ಭೀಕರ ಪ್ರವಾಹದ ಸೆಳೆತಕ್ಕೆ ಸಿಲುಕಿದ ಮೃತದೇಹಗಳು ನೇಪಾಳದೊಳಗೆ ಸುಮಾರು 150 ಕಿಲೋಮೀಟರ್‌ಗಳಷ್ಟು ದೂರ ಕೊಚ್ಚಿಕೊಂಡು ಬಂದು ಬಳಿಕ ಉತ್ತರ ಪ್ರದೇಶದ ಗಂಡಕ್ ನದಿ ಪ್ರದೇಶಕ್ಕೆ ತಲುಪಿವೆ. SSB ಇನ್ಸ್‌ಪೆಕ್ಟರ್ ಅರುಣ್ ಪಾಂಡೆ ಅವರ ಪ್ರಕಾರ, ನೇಪಾಳದಿಂದ ಗಂಡಕ್ ನದಿಗೆ ಕೊಚ್ಚಿಕೊಂಡು ಬಂದಿರಬಹುದು ಎಂದು ಶಂಕಿಸಲಾದ ಮೂರು ಮೃತದೇಹಗಳನ್ನು ಇದುವರೆಗೆ ಭಾರತದ ಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆ.
ನೇಪಾಳದ ಪ್ರವಾಹದ ಪರಿಣಾಮ
SSB ಇನ್ಸ್‌ಪೆಕ್ಟರ್ ಅರುಣ್ ಪಾಂಡೆ ಮಾತನಾಡಿ, ನೇಪಾಳದಿಂದ ಗಂಡಕ್ ನದಿಗೆ ಕೊಚ್ಚಿಕೊಂಡು ಬಂದಿರಬಹುದು ಎಂದು ಶಂಕಿಸಲಾದ ಮೂರು ಮೃತದೇಹಗಳನ್ನು ಇದುವರೆಗೆ ಭಾರತದ ವ್ಯಾಪ್ತಿಯಲ್ಲಿ ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ನೇಪಾಳದಲ್ಲಿ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಗಂಡಕ್ ನದಿಯಲ್ಲಿ ನೀರಿನ ಹರಿವು ತೀವ್ರಗೊಂಡಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಮೃತದೇಹಗಳು ಭಾರತದ ಪ್ರದೇಶಕ್ಕೆ ಕೊಚ್ಚಿಬರುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಪರಿಣಾಮ ಗಡಿ ಪ್ರದೇಶಗಳಲ್ಲೂ ಆತಂಕ ಮುಂದುವರಿದಿದ್ದು, ಭಾರತೀಯ ಅಧಿಕಾರಿಗಳು ನದಿ ಪಾತ್ರಗಳಲ್ಲಿ ನಿರಂತರ ನಿಗಾ ಮತ್ತು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಉಕ್ಕುತ್ತಿರುವ ಗಂಡಕ್ ನದಿ, ಅಪಾಯಕಾರಿ ಮಟ್ಟದಲ್ಲಿ ಹರಿವು
ನೇಪಾಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಡಿ ಪ್ರದೇಶದ ಹಲವು ನದಿಗಳು ಅಪಾಯದ ಮಟ್ಟಕ್ಕಿಂತ ಮೇಲೆಯೇ ಹರಿಯುತ್ತಿವೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಮತ್ತಷ್ಟು ಪ್ರವಾಹ ಹಾಗೂ ಸಾವು-ನೋವುಗಳ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಡಿ ಪ್ರದೇಶದ ಎಲ್ಲ ನದಿ ತಡೆಗೋಡೆಗಳು ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
NDRF ತಂಡಗಳ ನಿಯೋಜನೆ
ಮಹಾರಾಜ್‌ಗಂಜ್, ಕುಶಿನಗರ ಹಾಗೂ ನೆರೆಯ ಬಿಹಾರದ ನದಿ ತೀರಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ನಿಯೋಜಿಸಲಾಗಿದೆ. ನದಿಗಳ ಹರಿವು, ಪ್ರವಾಹದ ಪರಿಸ್ಥಿತಿ ಹಾಗೂ ಮತ್ತಷ್ಟು ಮೃತದೇಹಗಳು ಕೊಚ್ಚಿಕೊಂಡು ಬರುವ ಸಾಧ್ಯತೆಯ ಮೇಲೆ ತಂಡಗಳು ನಿಗಾ ಇಡುತ್ತಿವೆ.
ಜೊತೆಗೆ ಸಂಭವನೀಯ ನೀರಿನ ಉಕ್ಕುವಿಕೆ ಎದುರಿಸಲು ರಕ್ಷಣಾ ವ್ಯವಸ್ಥೆಯನ್ನೂ ಸಜ್ಜುಗೊಳಿಸಲಾಗಿದೆ. ನೇಪಾಳದ ಜಲಪ್ರಳಯದ ಪರಿಣಾಮ ಗಡಿ ದಾಟಿ ಭಾರತದಲ್ಲೂ ಆತಂಕ ಮೂಡಿಸಿದ್ದು, ಗಂಡಕ್ ನದಿ ಪಾತ್ರದ ಪ್ರದೇಶಗಳಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.