ಕಠ್ಮಂಡು: ನೇಪಾಳದಲ್ಲಿ ಜರುಗಿದ ಪ್ರವಾಹದ ನಡುವೆ ಹಸಿರು ಮನೆ, ಆ ಮನೆಯ ಬಾಲ್ಕನಿಯಲ್ಲಿ ಕುಟುಂಬವೊಂದು ಸಿಲುಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ನೇಪಾಳದಲ್ಲಿ ಸಂಭವಿಸಿದ ಹಠಾತ್ ಜಲಪ್ರಳಯದಲ್ಲಿ ನೂರಾರು ಮಂದಿ ದುರಂತ ಅಂತ್ಯ ಕಂಡಿದ್ದು, 2,600ಕ್ಕೂ ಅಧಿಕ ಜನರು ಇನ್ನೂ ಮಿಸ್ಸಿಂಗ್ ಪಟ್ಟಿಯಲ್ಲಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್ ಕಟ್ಟಡಗಳು, ಮನೆಗಳು ಧರೆಗೆ ಉರುಳಿ ಕೊಚ್ಚಿ ಹೋದವು.
ಈ ಮಧ್ಯೆ, ರಕ್ಕಸ ಪ್ರವಾಹಕ್ಕೂ ಅಲುಗಾಡದ ಹಸಿರು ಬಣ್ಣದ ಮನೆಯೊಂದು ಸದ್ಯ ಅನೇಕರ ಹುಬ್ಬೇರಿಸಿರುವುದು ಮಾತ್ರವಲ್ಲ, ಕಟ್ಟಡದಲ್ಲಿ ಒಂದು ಭಾಗವು ಕೊಚ್ಚಿಹೋಗದಿರಲು ಕಾರಣವೇನು ಎಂದು ತಿಳಿಯಲು ಜಾಲತಾಣಗಳನ್ನು ತೀವ್ರ ತಡಕಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಮನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವರು ಇದನ್ನು ಪವಾಡ ಎಂದಿದ್ದಾರೆ. ಮತ್ತೆ ಕೆಲವರು ಇದನ್ನು ಹೇಗೆ ಕಟ್ಟಲಾಗಿದೆ, ಇಂಜಿನಿಯರ್ ಯಾರು ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ. ಈಗ ಅಷ್ಟೊಂದು ಪ್ರವಾಹ ಬಂದ್ರೂ ಗಟ್ಟಿಯಾಗಿ ಮನೆ ನಿಲ್ಲಲ್ಲು ಕಾರಣ ಏನು ಎಂಬುದನ್ನು ತಜ್ಞರು ಚರ್ಚಿಸುತ್ತಿದ್ದಾರೆ.
ಹಸಿರು ಬಣ್ಣದ ಮನೆಯ ಬಾಲ್ಕನಿಯಲ್ಲಿ ಕುಟುಂಬದವರು ಜೀವ ಭಯದಿಂದ ನಿಂತಲ್ಲೇ ನಿಂತಿದ್ದರು. ದೃಶ್ಯ ವೈರಲ್ ಬೆನ್ನಲ್ಲೇ ಮನೆ ಕಟ್ಟಿದವನ ಬಗ್ಗೆ ನೆಟ್ಟಿಗರು ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮನೆಯ ಸುತ್ತಮುತ್ತಲೂ ರಭಸದಿಂದ ಹರಿಯುತ್ತಿದ್ದ ನದಿಯು, ವಾಹನಗಳನ್ನು ತನ್ನೊಂದಿಗೆ ಕರೆದುಕೊಂಡು ಹೋದರೂ ಸಹ ಮನೆಯನ್ನು ಬಿಟ್ಟದ್ದು ಹಲವರನ್ನು ಬೆರಗಾಗಿಸಿದೆ. ಈ ಮನೆಯನ್ನು ಕಟ್ಟಿದ ಎಂಜಿನೀಯರ್ ಗೆ ನೇಪಾಳ ರತ್ನ ಪ್ರಶಸ್ತಿ ನೀಡಬೇಕು ಎಂಬ ಮಾತುಗಳು ಕೇಳಿ ಬಂದಿವೆ.
ವರದಿಗಳ ಪ್ರಕಾರ, ಪ್ರವಾಹದ ಮಧ್ಯೆ ಗಟ್ಟಿಯಾಗಿ ನಿಂತಿದ್ದ ಈ ಮನೆ ಆರ್ ಸಿಸಿ (RCC) ಅಂದರೆ ಬಲವರ್ಧಿತ ಕಾಂಕ್ರೀಟ್ ಫ್ರೇಮ್ ರಚನೆಯ ಮೇಲೆ ನಿರ್ಮಾಣವಾಗಿರಬಹುದು. ಅಂದರೆ ಮನೆಯೊಳಗೆ ಕಬ್ಬಿಣದ ಸರಳುಗಳಿಂದ ಬಲಪಡಿಸಿದ ಕಾಂಕ್ರೀಟ್ ಕಾಲಮ್ ಮತ್ತು ಬೀಮ್ ಗಟ್ಟಿಯಾದ ಚೌಕಟ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಪ್ರವಾಹದ ಒತ್ತಡ ಬಂದಾಗ ಅದರ ಸಂಪೂರ್ಣ ಹೊಡೆತ ಕೇವಲ ಗೋಡೆಗಳ ಮೇಲೆ ಬೀಳುವುದಿಲ್ಲ. ಮನೆಯ ಮುಖ್ಯ ರಚನೆ ಆ ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರವಾಹವು ಬಂದು ಅಪ್ಪಳಿಸಿದಾಗ, ಈ ಫ್ರೇಮ್ ಆ ಭಾರಿ ಬಲವನ್ನು ಹೀರಿಕೊಂಡು ನೇರವಾಗಿ ಭೂಮಿಗೆ ವರ್ಗಾಯಿಸಿರುವುದು ಗಮನಾರ್ಹ. ಮುಖ್ಯವಾಗಿ, ನದಿ ಹರಿದುಬರುವ ದಿಕ್ಕಿನಲ್ಲಿ ಮನೆಯ ಕಟ್ಟಡ ವಿನ್ಯಾಸವು 'ವಿ' ಶೇಪ್ನಲ್ಲಿರುವುದನ್ನು ಕಾಣಬಹುದು. ಇದು ಪ್ರವಾಹದ ಹೊಡೆತವನ್ನು ತಡೆದುಕೊಳ್ಳಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ ಎನ್ನಲಾಗುತ್ತಿದೆ.
ಪ್ರವಾಹದ ಸಂದರ್ಭದಲ್ಲಿ ಯಾವ ಮನೆ ಉಳಿಯುತ್ತದೆ, ಯಾವುದು ಕುಸಿಯುತ್ತದೆ ಎಂಬುದನ್ನು ಒಂದೇ ಕಾರಣದಿಂದ ನಿರ್ಧರಿಸಲು ಸಾಧ್ಯವಿಲ್ಲ. ನೀರಿನ ವೇಗ, ಮಣ್ಣಿನ ಕೊಚ್ಚುವಿಕೆ, ಮನೆಯ ಅಡಿಪಾಯ, ನಿರ್ಮಾಣದ ಗುಣಮಟ್ಟ ಮತ್ತು ಪ್ರವಾಹದ ದಿಕ್ಕು ಎಲ್ಲವೂ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ.