ಮುಂಬೈ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ರೆಕ್ಕೆಗಳು ಡಿಕ್ಕಿ ಹೊಡೆದುಕೊಂಡಿದೆ. ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ (AI 2732) ಮತ್ತು ಇಂಡಿಗೋ (6E 791) ವಿಮಾನಗಳ ನಡುವೆ ಡಿಕ್ಕಿ ಹೊಡೆದುಕೊಂಡಿದೆ.
ಕೊಯಮತ್ತೂರಿಗೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಟ್ಯಾಕ್ಸಿ ಮಾಡುತ್ತಿದ್ದಾಗ, ಹೈದರಾಬಾದ್‌ನಿಂದ ಬಂದಿಳಿದ ಇಂಡಿಗೋ ವಿಮಾನ ಅದೇ ಹಾದಿಯಲ್ಲಿ ಬರುತ್ತಿತ್ತು. ಈ ಚಲನೆಯ ಸಮಯದಲ್ಲಿ, ಎರಡೂ ವಿಮಾನಗಳ ಬಲಪಕ್ಕದ ರೆಕ್ಕೆಗಳ ತುದಿಗಳು (Wing tips) ಪರಸ್ಪರ ಸ್ಪರ್ಶಿಸಿವೆ. ಘಟನೆಯ ಸಮಯದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಗಾಯಗಳಾಗಿಲ್ಲ. ಏರ್ ಇಂಡಿಯಾ ತನ್ನ ಪ್ರಯಾಣಿಕರನ್ನು ಅವರ ತಲುಪಬೇಕಾದ ಸ್ಥಳಕ್ಕೆ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಎರಡೂ ವಿಮಾನಯಾನ ಸಂಸ್ಥೆಗಳು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿವೆ.
ನಡೆದ ಘಟನೆಯೇನು?
ಏರ್ ಇಂಡಿಯಾ ವಿಮಾನ AI 2732 ನಿರ್ಗಮನಕ್ಕಾಗಿ C1 ರಿಂದ M4 ಕಡೆಗೆ ಟ್ಯಾಕ್ಸಿ ಮಾಡುತ್ತಿದ್ದಾಗ, ರನ್ ವೇಯಲ್ಲಿ ಬರುತ್ತಿದ್ದ ಇಂಡಿಗೋ ವಿಮಾನವು ಟ್ಯಾಕ್ಸಿ ಮಾಡಿ B1 ಗೆ ಸೇರುತ್ತಿತ್ತು. ಈ ಚಲನೆಯ ಸಮಯದಲ್ಲಿ, ಎರಡೂ ವಿಮಾನಗಳ ಬಲ ರೆಕ್ಕೆ ತುದಿಗಳು ಪರಸ್ಪರ ಸ್ಪರ್ಶಿಸಿದೆ. ಇದರಿಂದ ಎರಡು ವಿಮಾನಗಳು ರೆಕ್ಕೆಗೆ ಡ್ಯಾಮೇಜ್ ಆಗಿದೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಗೆ ಏರ್ ಇಂಡಿಯಾ, ಇಂಡಿಗೋ ಪ್ರತಿಕ್ರಿಯೆ
ಫೆಬ್ರವರಿ 3 ರಂದು ಮುಂಬೈನಿಂದ ಕೊಯಮತ್ತೂರಿಗೆ ಹಾರಾಟ ನಡೆಸುತ್ತಿದ್ದ AI2732 ವಿಮಾನವು ಟೇಕ್-ಆಫ್ ಆಗುವ ಮೊದಲು ಟ್ಯಾಕ್ಸಿವೇಯಲ್ಲಿ ಕಾಯುತ್ತಿದ್ದಾಗ ಮತ್ತೊಂದು ವಿಮಾನದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.
ಎರಡೂ ವಿಮಾನಗಳ ರೆಕ್ಕೆ ತುದಿಗಳು ಡ್ಯಾಮೇಜ್ ಆಗಿದೆ. ಇದರ ಪರಿಣಾಮವಾಗಿ ನಮ್ಮ ವಿಮಾನದ ರೆಕ್ಕೆ ತುದಿಗೆ ಹಾನಿಯಾಯಿತು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ನಮ್ಮ ತಂಡ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಬದಲಿ ವ್ಯವಸ್ಥೆ ಮಾಡಿದೆ ಎಂದು ಹೇಳಿದೆ.
ಇನ್ನು ಇಂಡಿಗೋ ಕೂಡ ಸ್ಪಷ್ಟನೆ ನೀಡಿದೆ. ಹೈದರಾಬಾದ್‌ನಿಂದ ಮುಂಬೈಗೆ ಹೊರಟಿದ್ದ ನಮ್ಮ 6E 791 ವಿಮಾನದ ರೆಕ್ಕೆಯ ತುದಿಯು ಲ್ಯಾಂಡಿಂಗ್ ನಂತರ ಟ್ಯಾಕ್ಸಿ ಮಾಡುವಾಗ ಮತ್ತೊಂದು ವಿಮಾನದ ರೆಕ್ಕೆ ಡಿಕ್ಕಿ ಹೊಡೆದಿದೆ.
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಪಾರ್ಕಿಂಗ್ ನಂತರ ಕೆಳಗಿಳಿದಿದ್ದಾರೆ. ವಿಮಾನವು ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಈ ಘಟನೆ ನಡೆದ ನಂತರ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಲಾಗಿದೆ. ಅವರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಂಡಿಗೋದಲ್ಲಿ, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆ ಮತ್ತು ಭದ್ರತೆ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದೆ.