ಗುವಾಹಟಿ: ಇದೇ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂಗೆ ಕಾಂಗ್ರೆಸ್ ಸಂಸದೆ ಮತ್ತು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದಿನಿಂದ ಎರಡು ದಿನಗಳ ಭೇಟಿ ನೀಡಿದ್ದಾರೆ. ಈ ಭೇಟಿ ವೇಳೆಯಲ್ಲಿ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದು, ದೇವರ ಆಶೀರ್ವಾದ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿದ್ದ ಬಾಬಾ, ಪ್ರಧಾನಿಯಾಗಿ ಆಶೀರ್ವಾದ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಮಹತ್ವಕಾಂಕ್ಷೆಯಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ಕಾಮಾಕ್ಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ನೇರವಾಗಿ ನಗರದ ಕಾಮಾಖ್ಯ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ದೇಗುಲದ ಭೇಟಿ ವೇಳೆ ಪ್ರಿಯಾಂಕಾ ಗಾಂಧಿ, ನಾಗಾ ಸಾಧುವಿನ ಜೊತೆ ಕಿರು ಸಂವಾದ ನಡೆಸಿದ್ದಾರೆ. ಆಗ ಅಘೋರಿ ಬಾಬಾ, ಪ್ರಿಯಾಂಕಾ ಗಾಂಧಿ ತಲೆ ಮೇಲೆ ಕೈಯಿಟ್ಟು "ಹಮಾರಾ ಬೇಟಿ ಪ್ರಧಾನ ಮಂತ್ರಿ ಬನೇಗಾ (ನಮ್ಮ ಮಗಳು ಪ್ರಧಾನಿಯಾಗುತ್ತಾಳೆ) ಎಂದು ಆಶೀರ್ವಾದ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ದೇವಾಲಯ ಭೇಟಿ ಬಳಿಕ ಗುವಾಹಟಿಯಲ್ಲಿನ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಬ್ಲಾಕ್ ಕಾಂಗ್ರೆಸ್ ಸಮಿತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ನಾಯಕರೊಂದಿಗೆ ಸರಣಿ ಸಭೆ ನಡೆಸಿದ್ದಾರೆ.
ಮತ್ತೊಂದೆಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಮಹತ್ವಾಕಾಂಕ್ಷಿಯಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ಪ್ರಿಯಾಂಕಾ ಗಾಂಧಿ ಅವರ ಜೊತೆಯಲ್ಲಿದ್ದು, ಕಾಮಾಕ್ಯ ದೇಗುಲದಲ್ಲಿ ವಿಶೇಪ ಪೂಜೆ ಸಲ್ಲಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಪ್ರಿಯಾಂಕಾ ಗಾಂಧಿ ಅವರೊಂದಿಗಿಂದು (ಫೆ.19) ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದೆವು. ತಾಯಿ ಕಾಮಾಕ್ಯ ಆಶೀರ್ವಾದವು ಎಲ್ಲರಿಗೂ ಶಕ್ತಿ ಮತ್ತು ಸಮೃದ್ಧಿ ನೀಡಲಿ ಎಂದು ಪಾರ್ಥಿಸಿರುವುದಾಗಿ ತಿಳಿಸಿದ್ದಾರೆ.