ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಶುಕ್ರವಾರ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟ ನಾಲ್ವರು ಭಾರತೀಯ ಯುವ ಕಾಂಗ್ರೆಸ್(ಐವೈಸಿ) ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಧಿತ ಕಾಂಗ್ರೆಸ್ ಕಾರ್ಯಕರ್ತರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಿದ ದೆಹಲಿ ಪೊಲೀಸರು, ಆರೋಪಿಗಳನ್ನು ಐದು ದಿನ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ವಿಚಾರಣೆ ನಡೆಸಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರವಿ ಅವರು, ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.
ಬಂಧಿತ ಪ್ರತಿಭಟನಾಕಾರರನ್ನು ಬಿಹಾರದ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ; ಬಿಹಾರದ ಐವೈಸಿ ರಾಜ್ಯ ಕಾರ್ಯದರ್ಶಿ ಕುಂದನ್ ಯಾದವ್; ಉತ್ತರ ಪ್ರದೇಶದ ಐವೈಸಿ ರಾಜ್ಯ ಅಧ್ಯಕ್ಷ ಅಜಯ್ ಕುಮಾರ್; ಮತ್ತು ತೆಲಂಗಾಣದ ನರಸಿಂಹ ಯಾದವ್ ಎಂದು ಗುರುತಿಸಲಾಗಿದೆ.
ಬಂಧಿತ ಪ್ರತಿಭಟನಾಕಾರರು ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಚಿತ್ರಗಳಿರುವ ಟಿ-ಶರ್ಟ್‌ಗಳನ್ನು ಧರಿಸಿದ್ದಾರೆ ಎಂದು ವಾದಿಸಿದ ದೆಹಲಿ ಪೊಲೀಸರು, ಬಂಧಿತ ಪ್ರತಿಭಟನಾಕಾರರನ್ನು ಐದು ದಿನಗಳ ಕಸ್ಟಡಿಗೆ ನೀಡುವಂತೆ ಕೋರಿದರು.
“ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ” ಎಂಬ ಸ್ಲೋಗನ್ ಹೊಂದಿರುವ ಟಿ-ಶರ್ಟ್‌ಗಳನ್ನು ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆಗಳನ್ನು ಕೂಗಿದರು.
‘ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಕೆಲವು ನಿಮಿಷಗಳ ಕಾಲ ನಡೆಯಿತು. ಕೊನೆಗೆ ಅವರನ್ನು ಬಲವಂತವಾಗಿ ಸಭಾಂಗಣದಿಂದ ಹೊರಗೆ ಕರೆದೊಯ್ಯಲಾಯಿತು. ನಂತರ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು.