ನವದೆಹಲಿ: ವಿಶ್ವದರ್ಜೆಯ ಸೌಕರ್ಯಗಳು ಮತ್ತು ಆನ್‌ಬೋರ್ಡ್ ಸೌಕರ್ಯಗಳನ್ನು ಹೊಂದಿರುವ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು, ಗುವಾಹಟಿ(ಕಾಮಾಕ್ಯ) ಮತ್ತು ಕೋಲ್ಕತ್ತಾದ ಹೌರಾ ನಡುವೆ ರಾತ್ರಿಯಿಡೀ ಗರಿಷ್ಠ ವೇಗದಲ್ಲಿ ಸಂಚರಿಸಲಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ.
ಜನವರಿ 14 ರ ನಂತರ ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದು, ಜನವರಿ 17 ಮತ್ತು 19 ರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟಿಸಲಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನೆಯ ನಿಖರವಾದ ದಿನಾಂಕವನ್ನು ಎರಡು ದಿನಗಳಲ್ಲಿ ಘೋಷಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೈಷ್ಣವ್, ವಂದೇ ಭಾರತ್ ಸ್ಲೀಪರ್ ರೈಲಿನ ದರಗಳು ಗುವಾಹಟಿ ಮತ್ತು ಕೋಲ್ಕತ್ತಾ ನಡುವಿನ ವಿಮಾನ ದರಗಳಿಗಿಂತ ಗಣನೀಯವಾಗಿ ಕಡಿಮೆಯಿರುತ್ತದೆ. ಏಕೆಂದರೆ ರೈಲುಗಳು ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಕೈಗೆಟುಕುವ ರಾಷ್ಟ್ರೀಯ ಸಾರಿಗೆ ವಿಧಾನವನ್ನಾಗಿ ಮಾಡುವ ಪ್ರಧಾನಿ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಬೆಲೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದರು.
ಗುವಾಹಟಿ ಮತ್ತು ಕೋಲ್ಕತ್ತಾ ನಡುವಿನ ವಿಮಾನ ಪ್ರಯಾಣಕ್ಕೆ ಸಾಮಾನ್ಯವಾಗಿ ಸುಮಾರು 6,000 ರಿಂದ 8,000 ರೂ.ಗಳವರೆಗೆ ದರ ವಿಧಿಸಲಾಗುತ್ತದೆ. ವಿಮಾನ ದರಗಳಿಗೆ ಹೋಲಿಸಿದರೆ, ರೈಲ್ವೆ ಸಚಿವಾಲಯವು ವಂದೇ ಭಾರತ್ ಸ್ಲೀಪರ್ ರೈಲು ದರವನ್ನು ಸ್ವಲ್ಪ ಕಡಿಮೆ ಮಾಡಲು ನಿರ್ಧರಿಸಿದೆ. "ವಂದೇ ಭಾರತ್‌ನಲ್ಲಿ, 3ನೇ ಎಸಿ ದರವು ಆಹಾರ ಸೇರಿದಂತೆ ಸುಮಾರು 2,300 ರೂ. ಇದ್ದರೆ, 2ನೇ ಎಸಿ ಸುಮಾರು 3,000 ರೂ. ಮತ್ತು 1ನೇ ಎಸಿ ಸುಮಾರು 3,600 ರೂ.ಗಳಾಗಿರುತ್ತದೆ. ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ದರಗಳನ್ನು ನಿಗದಿಪಡಿಸಲಾಗಿದೆ" ಎಂದು ಸಚಿವರು ಹೇಳಿದರು.
2026 ರ ವೇಳೆಗೆ 12 ವಂದೇ ಭಾರತ್ ಸ್ಲೀಪರ್ ರೈಲುಗಳು ಓಡಲಿವೆ, ಅವುಗಳಲ್ಲಿ ಆರು ಮುಂದಿನ ಆರು ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.