ನವದೆಹಲಿ: 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ (RNGSS) ಪ್ರಶಸ್ತಿ ಪ್ರದಾನ ಸಮಾರಂಭ 2025 ಚೆನ್ನೈನಲ್ಲಿ ಶುಕ್ರವಾರ ನಡೆಯಲಿದೆ.
ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಸಮಾರಂಭದಲ್ಲಿ ಭಾರತದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಹಾಜರಾಗಲಿದ್ದಾರೆ.
ಭಾರತೀಯ ಮುದ್ರಣ ಮಾಧ್ಯಮದ ಪ್ರಮುಖ ಸಂಸ್ಥೆ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥಾಪಕ ರಾಮನಾಥ್ ಗೋಯೆಂಕಾ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಬರಹಗಾರರನ್ನು ಗೌರವಿಸುವುದಕ್ಕಾಗಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಗೌರವಿಸುವುದಕ್ಕಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
2023ರಲ್ಲಿ ಒಡಿಶಾ ಲಿಟರರಿ ಫೆಸ್ಟಿವಲ್‌ನಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಯಿತು. 2024ರಲ್ಲಿ ದೆಹಲಿಯಲ್ಲಿ ಯಶಸ್ವಿ ಕಾರ್ಯಕ್ರಮ ಆಯೋಜಿಸಿದ ಬಳಿಕ, ಈ ವರ್ಷದ ಸಮಾರಂಭವನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮುಖ್ಯ ಕಚೇರಿಯಿರುವ ಚೆನ್ನೈನಲ್ಲಿ ನಡೆಸಲಾಗುತ್ತಿದೆ.
ಲೈಫ್‌ಟೈಮ್ ಅಚೀವ್‌ಮೆಂಟ್, ಬೆಸ್ಟ್ ಫಿಕ್ಷನ್, ಬೆಸ್ಟ್ ನಾನ್-ಫಿಕ್ಷನ್ ಮತ್ತು ಬೆಸ್ಟ್ ಡೆಬ್ಯೂಟ್ ಎಂಬ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಈ ವರ್ಷ ಡಿಬ್ಯೂಟ್ ಫಿಕ್ಷನ್ ಮತ್ತು ನಾನ್-ಫಿಕ್ಷನ್ ವಿಭಾಗಗಳನ್ನು ಒಂದೇ ವರ್ಗದಲ್ಲೇ ಸಂಯೋಜಿಸಲು ಹಾಗೂ ಫಿಕ್ಷನ್ ಮತ್ತು ನಾನ್-ಫಿಕ್ಷನ್ ವಿಭಾಗಗಳನ್ನು ಪ್ರತ್ಯೇಕವಾಗಿಯೇ ಉಳಿಸಲಾಗಿದೆ ಎಂದು ಟಿಎನ್ಐಇ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕುಮಾರ್ ಸೊಂಥಾಲಿಯಾ ತಿಳಿಸಿದ್ದಾರೆ.
ಮೂರನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ (RNGSS) ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ 2024 ಜುಲೈ ರಿಂದ 2025 ಜೂನ್ ನಡುವೆ ಬಿಡುಗಡೆಯಾದ ಪುಸ್ತಕಗಳನ್ನು ಪರಿಗಣಿಸಿದೆ.
ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಒಡಿಶಾದ ಟಿಎನ್ಐಇ ಕಚೇರಿಗಳ ಹಿರಿಯ ಸಂಪಾದಕರು ಹಾಗೂ ವಿವಿಧ ಪ್ರಕಾಶಕರು ಶಿಫಾರಸುಗಳನ್ನು ಮಾಡಿದ್ದಾರೆ.
ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ನಡೆದ ಆಂತರಿಕ ಮತ್ತು ಬಾಹ್ಯ ತೀರ್ಪುಗಾರರ ಸಭೆಯಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಪ್ರತಿಯೊಂದು ಪುಸ್ತಕವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಚರ್ಚಿಸಿ, ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಲೇಖಕ ಮತ್ತು ಮಾಜಿ ರಾಜತಾಂತ್ರಿಕ ಪವನ್ ವರ್ಮಾ ಅವರು ತೀರ್ಪುಗಾರರ ಅಧ್ಯಕ್ಷತೆ ವಹಿಸಿದ್ದರು; ಲೇಖಕಿ ಗೀತಾ ಹರಿಹರನ್ ಮತ್ತು ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಇತರ ಬಾಹ್ಯ ತೀರ್ಪುಗಾರರಾಗಿದ್ದರು.