ಮುಂಬಯಿ: ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧದ ನಂತರ ಪುಣೆ ಪುರಸಭೆ ಚುನಾವಣೆ ಅಭ್ಯರ್ಥಿ ಪೂಜಾ ಮೋರೆ-ಜಾಧವ್ ಅವರ ಉಮೇದುವಾರಿಕೆಯನ್ನು ಬಿಜೆಪಿ ಹಿಂತೆಗೆದುಕೊಂಡಿದೆ.
ಜನವರಿ 15 ರ ಚುನಾವಣೆಗೆ ಮಿತ್ರಪಕ್ಷ ಆರ್‌ಪಿಐ ಕೋಟಾದಡಿಯಲ್ಲಿ ವಾರ್ಡ್ ಸಂಖ್ಯೆ 2 ಕ್ಕೆ ಬಿಜೆಪಿಯಿಂದ ಅವರು ತಮ್ಮ ಎಬಿ ಫಾರ್ಮ್ (ನಾಮನಿರ್ದೇಶನ ಸಲ್ಲಿಸಲು ಪ್ರಮುಖ ದಾಖಲೆ) ಪಡೆದಿದ್ದರು.
ಮರಾಠಾ ಕೋಟಾ ಆಂದೋಲನದ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅವರ ಪತ್ನಿ ವಿರುದ್ಧ ಅವರು ವೈಯಕ್ತಿಕ ಟೀಕೆಗಳನ್ನು ಮಾಡಿರುವ ಹಳೆಯ ವೀಡಿಯೊಗಳು ಕಾಣಿಸಿಕೊಂಡ ನಂತರ ಅವರ ನಾಮಪತ್ರ ಸಲ್ಲಿಕೆ ತೊಂದರೆಗೆ ಸಿಲುಕಿತು.
ಕೇಂದ್ರ ಸಚಿವ ಮತ್ತು ಪುಣೆಯ ಬಿಜೆಪಿ ಸಂಸದ ಮುರಳೀಧರ್ ಮೊಹೋಲ್ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿದರು. ತಾವು ಸಾಮಾಜಿಕ ಮಾಧ್ಯಮ ಟ್ರೋಲ್‌ಗಳಿಗೆ ಬಲಿಪಶು ಆಗಿದ್ದೇನೆ ಎಂದು ಪೂಜಾ ಮೋರೆ ಅಳಲು ತೋಡಿಕೊಂಡಿದ್ದಾರೆ.
ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ್ದಾರೆ. ನಾನು ಬಿಜೆಪಿಯ ಸಿದ್ಧಾಂತವನ್ನು ನಂಬುವುದಿಲ್ಲ ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ. ಟ್ರೋಲ್ ಪರಿಗಣಿಸಿ, ನಾನು ನನ್ನ ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
"ಬೇರೊಬ್ಬ ಮಹಿಳೆ" ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ , ಆದರೆ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಮಹಾರಾಷ್ಟ್ರದ 28 ನಾಗರಿಕ ಸಂಸ್ಥೆಗಳ ಜೊತೆಗೆ ಪುಣೆ ಮಹಾನಗರ ಪಾಲಿಕೆ ಚುನಾವಣೆಗಳು ಜನವರಿ 15 ರಂದು ನಡೆಯಲಿವೆ. ಮತ ಎಣಿಕೆ ಮರುದಿನ ನಡೆಯಲಿದೆ. ಶಿವಸೇನೆ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ನಗರದ ಪ್ರಮುಖ ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.