ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಉನ್ನತ ಹುದ್ದೆಯನ್ನು ಯಾರು ಅಲಂಕರಿಸಬೇಕೆಂಬ ಬಗ್ಗೆ ರಾಜಕೀಯ ಪಕ್ಷಗಳ ವಾದ - ಪ್ರತಿವಾದಗಳ ನಡುವೆಯೇ, ಮುಂದಿನ ಮುಂಬೈ ಮೇಯರ್ ಆಡಳಿತಾರೂಢ ಮಹಾಯುತಿ ಪಕ್ಷದವರಾಗಿರುತ್ತಾರೆ ಮತ್ತು ಅವರು 'ಹಿಂದೂ- ಮರಾಠಿ' ಆಗಿರುತ್ತಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಹೇಳಿದ್ದಾರೆ.
ಇಂದು ನಗರದಲ್ಲಿ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಾ ಸಿಎಂ, "ಮುಂಬೈ ಮೇಯರ್ ಮಹಾಯುತಿಯವರಾಗಿರುತ್ತಾರೆ. ಮುಂಬೈ ಮೇಯರ್ ಹಿಂದೂ ಮತ್ತು ಮರಾಠಿ ವ್ಯಕ್ತಿಯಾಗಿರುತ್ತಾರೆ" ಎಂದರು.
ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸತಮ್ ಇತ್ತೀಚೆಗೆ ತಮ್ಮ ಪಕ್ಷವು ಯಾವುದೇ 'ಖಾನ್' ಮುಂಬೈ ಮೇಯರ್ ಆಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಶಿವಸೇನೆ-ಯುಬಿಟಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದವು.
ಇತ್ತೀಚೆಗೆ ಉದ್ಧವ್ ಠಾಕ್ರೆ ಅವರೊಂದಿಗೆ ಒಂದಾದ ನಂತರ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರು 'ಮುಂಬೈನ ಮೇಯರ್ ಮರಾಠಿಗರಾಗಿರುತ್ತಾರೆ ಮತ್ತು ಅವರು ನಮ್ಮವರು' ಎಂದು ಘೋಷಿಸಿದ್ದರು.
ಮುಂಬೈಗೆ ಹಿಂದೂ ಮತ್ತು ಮರಾಠಿ ಮೇಯರ್ ಆಯ್ಕೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಫಡ್ನವೀಸ್ ಈಗ ಭಾರತೀಯ ಜನತಾ ಪಕ್ಷದ ವಾದವನ್ನು ಮತ್ತಷ್ಟು ತೀಕ್ಷ್ಣಗೊಳಿಸಿದ್ದಾರೆ. ಇದು ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.