ನವದೆಹಲಿ: ಇಂದೋರ್‌ನಲ್ಲಿ ಕುಡಿಯುವ ನೀರು ಕಲುಷಿತಗೊಂಡು ಹತ್ತು ಮಂದಿ ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಇಂದೋರ್‌ನಲ್ಲಿ ನೀರು ಪೂರೈಕೆ ಮಾಡಿಲ್ಲ - ಕೇವಲ ವಿಷವನ್ನು ಸರಬರಾಜು ಮಾಡಲಾಗಿದೆ. ಆದರೂ ಅಲ್ಲಿನ ಆಡಳಿತ ಕುಂಭಕರ್ಣನಂತೆ ನಿದ್ರಿಸುತ್ತಿದೆ" ಎಂದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದುಃಖ ಮನೆಯಿಂದ ಮನೆಗೆ ಹರಡಿದೆ, ಬಡವರು ಅಸಹಾಯಕರಾಗಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಸಾಂತ್ವನ ಹೇಳುವ ಬದಲು ದುರಹಂಕಾರದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನ ಕೊಳಕು, ದುರ್ವಾಸನೆ ಬೀರುವ ನೀರಿನ ಬಗ್ಗೆ ಪದೇ ಪದೇ ದೂರು ನೀಡಿದರೂ ಸರ್ಕಾರ ಏಕೆ ಗಮನಹರಿಸಲಿಲ್ಲ? ಕುಡಿಯುವ ನೀರಿನಲ್ಲಿ ಕೊಳಚೆ ನೀರು ಹೇಗೆ ಬೆರೆತುಹೋಯಿತು? ಸಕಾಲದಲ್ಲಿ ಸರಬರಾಜು ಏಕೆ ಸ್ಥಗಿತಗೊಳಿಸಲಿಲ್ಲ? ಜವಾಬ್ದಾರಿಯುತ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ? ಇವು "ಉಚಿತ" ಪ್ರಶ್ನೆಗಳಲ್ಲ - ಹೊಣೆಗಾರಿಕೆಯ ಪ್ರಶ್ನೆ. ಶುದ್ಧ ನೀರು ಒಂದು ಔದಾರ್ಯವಲ್ಲ; ಅದು ಬದುಕುವ ಹಕ್ಕು ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಬಿಜೆಪಿಯ ಡಬಲ್-ಎಂಜಿನ್ ಸರ್ಕಾರ ಬಡವರ ಬದುಕುವ ಹಕ್ಕನ್ನು ಕಿತ್ತುಕೊಂಡಿದೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಅದರ ನಿರ್ದಯ ನಾಯಕತ್ವ ಈ ದುರಂತಕ್ಕೆ ಕಾರಣ. ಮಧ್ಯಪ್ರದೇಶ ಸರ್ಕಾರ ಈಗ ದುರಾಡಳಿತದ ಕೇಂದ್ರಬಿಂದುವಾಗಿದೆ. ಒಂದು ಕಡೆ ಕೆಮ್ಮಿನ ಸಿರಪ್‌ನಿಂದ ಸಾವುಗಳು, ಇನ್ನೊಂದು ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲಿಗಳು ಮಕ್ಕಳ ಜೀವ ಬಲಿ ಪಡೆಯುತ್ತಿವೆ. ಮತ್ತೊಂದು ಕಡೆ ಒಳಚರಂಡಿ ನೀರು ಮಿಶ್ರಿತ ಕಲುಷಿತ ನೀರು ಕುಡಿದು ಸಾವುಗಳು ಸಂಭವಿಸುತ್ತಿವೆ. ಬಡವರು ಸಾಯುವಾಗಲೆಲ್ಲಾ ಮೋದಿ ಜಿ ಮೌನವಾಗಿಯೇ ಇರುತ್ತಾರೆ" ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಕಿಡಿ ಕಾರಿದ್ದಾರೆ.