ಭೋಪಾಲ್: "ಭಾರತದ ಅತ್ಯಂತ ಸ್ವಚ್ಛ ನಗರ" ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 14–15 ಜನ ಸಾವಿನ ನಂತರ ಡಾ. ಮೋಹನ್ ಯಾದವ್ ನೇತೃತ್ವದ ಮಧ್ಯ ಪ್ರದೇಶದ ಸರ್ಕಾರದ ವಿರುದ್ಧ ಬಿಜೆಪಿಯ ಫೈರ್‌ಬ್ರಾಂಡ್ ಹಿರಿಯ ನಾಯಕಿ ಉಮಾ ಭಾರತಿಯವರು ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ 14–15 ಜೀವಗಳನ್ನು ಬಲಿ ಪಡೆದಿರುವ ದುರಂತದ ಕುರಿತು X ನಲ್ಲಿ ಸರಣಿ ಪೋಸ್ಟ್ ಮಾಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು, ಈ ದುರಂತಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ನೇರ ಹೊಣೆಗಾರರನ್ನಾಗಿ ಮಾಡಿದ್ದಾರೆ.
“2025 ರ ಕೊನೆಯಲ್ಲಿ ಇಂದೋರ್‌ನಲ್ಲಿ ಕಲುಷಿತ ನೀರಿನಿಂದ ಉಂಟಾದ ಸಾವುಗಳು ನಮ್ಮ ರಾಜ್ಯ, ನಮ್ಮ ಸರ್ಕಾರ ಮತ್ತು ನಮ್ಮ ಇಡೀ ವ್ಯವಸ್ಥೆ ನಾಚಿಕೆಪಡುವಂತೆ ಮಾಡಿದೆ. ಇದು ಕರಾಳ ಘಟನೆ. ಅತ್ಯಂತ ಸ್ವಚ್ಛ ಎಂದು ಪ್ರಶಸ್ತಿ ಪಡೆದ ನಗರದಲ್ಲಿ, ಅಂತಹ ಕೊಳಕು - ವಿಷ ಮಿಶ್ರಿತ ನೀರು ಹಲವಾರು ಜೀವಗಳನ್ನು ಬಲಿ ಪಡೆದಿರುವುದು ನಾಚಿಕೆಗೇಡಿನ ಸಂಗತಿ. ಸಾವಿನ ಸಂಖ್ಯೆ ಹೆಚ್ಚುತ್ತಿದೆ” ಎಂದು ಉಮಾ ಭಾರ್ತಿ ಬರೆದಿದ್ದಾರೆ.
ಇನ್ನು ಪರಿಹಾರದ ವಿಚಾರಕ್ಕೂ ಸ್ವಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ, "ಮನುಷ್ಯನ ಜೀವದ ಬೆಲೆ 2 ಲಕ್ಷ ರೂ. ಅಲ್ಲ. ಕುಟುಂಬಗಳು ಶಾಶ್ವತವಾಗಿ ದುಃಖದಲ್ಲಿ ಬದುಕುತ್ತವೆ. ಈ ಪಾಪವು ಆಳವಾದ ಪಶ್ಚಾತ್ತಾಪವನ್ನು ಬಯಸುತ್ತದೆ. ಬಲಿಪಶುಗಳಿಗೆ ಕ್ಷಮೆ ಕೇಳಬೇಕು ಮತ್ತು ತಪ್ಪಿತಸ್ಥರೆಲ್ಲರಿಗೂ ಗರಿಷ್ಠ ಶಿಕ್ಷೆ ನೀಡಬೇಕು" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
1990ರ ದಶಕದ ಅಯೋಧ್ಯಾ ದೇವಾಲಯ ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಉಮಾ ಭಾರತಿ, ಈ ಬಿಕ್ಕಟ್ಟು ಪ್ರಸ್ತುತ ರಾಜ್ಯ ನಾಯಕತ್ವಕ್ಕೆ ನಿರ್ಣಾಯಕ ಕ್ಷಣ. "ಇದು ಮೋಹನ್ ಯಾದವ್ ಜಿ ಅವರಿಗೆ ಪರೀಕ್ಷೆಯ ಸಮಯ" ಎಂದು ಅವರು ಬರೆದಿದ್ದಾರೆ.