ಲಕ್ನೋ: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಹರಿತವಾದ ಆಯುಧದಿಂದ ಕೊಂದ ಆರೋಪದ ಮೇಲೆ 18 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸುಖರಾಜ್ ಪ್ರಜಾಪತಿ (50) ಕೊಲೆಯಾದ ವ್ಯಕ್ತಿ. ಗುರುವಾರ ಮಧ್ಯಾಹ್ನ ಮುರ್ವಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 3.30 ರ ಸುಮಾರಿಗೆ ಹರಿತವಾದ ಆಯುಧದಿಂದ ತಲೆಗೆ ಹೊಡೆದು ಕೊಲ್ಲಲಾಗಿದೆ. ಶವ ಮನೆಯಲ್ಲಿ ಪತ್ತೆಯಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜೇಂದ್ರ ಸಿಂಗ್ ರಾಜವತ್ ಹೇಳಿದ್ದಾರೆ.
ಮೃತ ವ್ಯಕ್ತಿಯ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಹಿಳೆಯನ್ನು ಫರ್ಸಾ ಎಂಬ ಆಯುಧದೊಂದಿಗೆ ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ತನ್ನ ಮನೆಗೆ ನುಗ್ಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಮನೆಯಲ್ಲಿ ಇರಿಸಲಾಗಿದ್ದ 'ಫರ್ಸಾ'ದಿಂದ ಆತನಿಗೆ ಹೊಡೆದಿದ್ದು ಆತನ ಸಾವಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಆರೋಪಿಯನ್ನು ಶುಕ್ರವಾರ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.