ಚಂಡೀಗಢ: ಫರಿದಾಬಾದ್ ನ ಹೊಟೇಲ್ ನಲ್ಲಿ 17 ವರ್ಷದ ಶೂಟರ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಾಷ್ಟ್ರೀಯ ತರಬೇತುದಾರ ಅಂಕುಶ್ ಭಾರದ್ವಾಜ್ ಅವರ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶೂಟರ್ ಕುಟುಂಬ ಸಲ್ಲಿಸಿದ ವಿವರವಾದ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮಂಗಳವಾರ ಎಫ್‌ಐಆರ್ ದಾಖಲಾಗಿದ್ದು, ಸಾಕ್ಷಿಗಳಿಂದ ಹೇಳಿಕೆ ದಾಖಲೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ತನಿಖೆ ಮುಂದುವರೆದಿದೆ.
ಎಫ್‌ಐಆರ್ ಪ್ರಕಾರ, ನವದೆಹಲಿಯ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ. ಆಕೆಯ ಕಾರ್ಯಕ್ಷಮತೆ ಪರಿಶೀಲನೆ ನೆಪದಲ್ಲಿ ಭಾರದ್ವಾಜ್ ಫರಿದಾಬಾದ್‌ನ ಹೋಟೆಲ್ ಕೊಠಡಿಯಲ್ಲಿ ಶೂಟರ್ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ವೃತ್ತಿಜೀವನವನ್ನು ಹಾಳುಮಾಡುವುದಾಗಿ ಮತ್ತು ಕುಟುಂಬಕ್ಕೆ ಹಾನಿ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿರುವುದಾಗಿ ಎಫ್ ಐಆರ್ ನಲ್ಲಿ ಆರೋಪಿಸಲಾಗಿದೆ. ಅಂಕುಶ್ ಈ ಹಿಂದೆ ಮತ್ತೊಬ್ಬ ಮಹಿಳಾ ಶೂಟರ್ ಗೂ ಇದೇ ರೀತಿಯ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅಥ್ಲೀಟ್ ಆರೋಪಿಸಿದ್ದಾರೆ.
ಪೊಲೀಸರು ಆತನ ವಿರುದ್ಧ ಫರಿದಾಬಾದ್ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ನೇಮಿಸಿದ 13 ರಾಷ್ಟ್ರೀಯ ಪಿಸ್ತೂಲ್ ತರಬೇತುದಾರರಲ್ಲಿ ಆರೋಪಿಯೂ ಸೇರಿದ್ದಾರೆ. ಶೂಟರ್ ಗೆ ಲೈಂಗಿಕ ಕಿರುಕುಳಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.
ವಿಚಾರಣೆ ನಡೆಯುವವರೆಗೂ ಕೋಚ್ ಅಂಕುಶ್ ಅವರನ್ನು ಎಲ್ಲಾ ಕರ್ತವ್ಯಗಳಿಂದ ಅಮಾನತುಗೊಳಿಸಲಾಗಿದೆ, ಯಾವುದೇ ಹೊಸ ಹುದ್ದೆ ನೀಡಲಾಗುವುದಿಲ್ಲ ಎಂದು NRAI ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಸಿಂಗ್ ಹೇಳಿದ್ದಾರೆ.