ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸ ಮತ್ತು ಕಚೇರಿ ಜಾರಿ ನಿರ್ದೇಶನಾಲಯ(ಇಡಿ) ನಡೆಸಿದ ದಾಳಿಯನ್ನು ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಕ್ಷದ ಹಿರಿಯ ನಾಯಕರು, ಸಚಿವರು, ಸಂಸದರು, ಶಾಸಕರು ಮತ್ತು ಬೆಂಬಲಿಗರೊಂದಿಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ 8 ಬಿಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದರು.
2026 ರ ವಿಧಾನಸಭಾ ಚುನಾವಣೆಗೆ ಮುನ್ನ "ರಾಜಕೀಯ ಸೇಡಿಗಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ" ಎಂದು ಮಮಾತ ಬ್ಯಾನರ್ಜಿ ಹಾಗೂ ಬೆಂಬಲಿಗರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇಡಿ ದಾಳಿ ನಡೆಸಿ, ಶೋಧ ನಡೆಸುತ್ತಿರುವಾಗಲೇ ಮಮತಾ ಬ್ಯಾನರ್ಜಿ ಅವರು ಪ್ರತೀಕ್ ಜೈನ್ ಅವರ ಲೌಡನ್ ಸ್ಟ್ರೀಟ್ ನಿವಾಸಕ್ಕೆ ನಾಟಕೀಯ ಭೇಟಿ ನೀಡಿದ ಒಂದು ದಿನದ ನಂತರ ಈ ಪ್ರತಿಭಟನಾ ರ್ಯಾಲಿ ನಡೆದಿದೆ.
ಮತ್ತೊಂದು ಕಡೆ, ದೆಹಲಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಹೊರಗೂ ಪ್ರತಿಭಟನೆ ನಡೆಸಿದ ಟಿಎಂಸಿ ಸಂಸದರನ್ನು ಬಂಧಿಸಲಾಗಿದೆ. ಅಲ್ಲಿ ಅವರು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ತಮ್ಮ ಪಕ್ಷದ ಸಂಸದರ ಬಂಧವನ್ನು ಖಂಡಿಸಿದ ಮಮತಾ ಬ್ಯಾನರ್ಜಿ, ಇದು "ನಾಚಿಕೆಗೇಡಿನ ಮತ್ತು ಸ್ವೀಕಾರಾರ್ಹವಲ್ಲ" ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ "ದಾಳಿ" ಎಂದು ಟೀಕಿಸಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿದ ಮಮತಾ ಬ್ಯಾನರ್ಜಿ, "ಗೃಹ ಸಚಿವರ ಕಚೇರಿಯ ಹೊರಗೆ ಪ್ರತಿಭಟಿಸುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಚುನಾಯಿತ ಪ್ರತಿನಿಧಿಗಳನ್ನು ಬೀದಿಗಳಿಗೆ ಎಳೆದು ತರುವುದು ಸರಿಯಲ್ಲ. ಇದು ಸಮವಸ್ತ್ರದಲ್ಲಿರುವ ಸರ್ಕಾರದ ದುರಹಂಕಾರ. ಇದು ಪ್ರಜಾಪ್ರಭುತ್ವ, ಬಿಜೆಪಿಯ ಖಾಸಗಿ ಆಸ್ತಿಯಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.