ನವದೆಹಲಿ: ದೇಶದ್ರೋಹ ಆರೋಪದಲ್ಲಿ ಜೈಲಿನಲ್ಲಿರುವ ಜೆಎನ್ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಪತ್ರ ಬರೆದಿರುವುದನ್ನು ಭಾರತ ಶುಕ್ರವಾರ ಅಸಮ್ಮತಿ ವ್ಯಕ್ತಪಡಿಸಿದೆ.
ಸಾರ್ವಜನಿಕ ಪ್ರತಿನಿಧಿಗಳು ಇತರ ಪ್ರಜಾಪ್ರಭುತ್ವಗಳಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ತಿರುಗೇಟು ನೀಡಿದೆ. ಕಳೆದ ತಿಂಗಳು ಅಮೆರಿಕದಲ್ಲಿ ಉಮರ್ ಖಾಲಿದ್ ಅವರ ಪೋಷಕರು ಭೇಟಿಯಾದಾಗ ಅನಿವಾಸಿ ಭಾರತೀಯ ಮಮ್ದಾನಿ, ಖಾಲಿದ್ ಗೆ ತಮ್ಮ ಕೈಯಿಂದಲೇ ಬರೆದ ಪತ್ರವೊಂದನ್ನು ಬರೆದಿದ್ದರು.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಸಾರ್ವಜನಿಕ ಪ್ರತಿನಿಧಿಗಳು ಇತರ ಪ್ರಜಾಪ್ರಭುತ್ವಗಳಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು.
ವೈಯಕ್ತಿಕ ಪೂರ್ವಾಗ್ರಹಗಳನ್ನು ವ್ಯಕ್ತಪಡಿಸುವುದು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಯೋಗ್ಯವಲ್ಲ. ಅಂತಹ ಹೇಳಿಕೆಗಳ ಬದಲಿಗೆ, ಅವರಿಗೆ ವಹಿಸಲಾದ ಜವಾಬ್ದಾರಿಗಳತ್ತ ಗಮನ ಹರಿಸುವುದು ಉತ್ತಮ ಎಂದು ಜೈಸ್ವಾಲ್ ತಿರುಗೇಟು ನೀಡಿದರು.
ಸೆಪ್ಟೆಂಬರ್ 2020 ರ ದೆಹಲಿ ಗಲಭೆ ಪಿತೂರಿ ಆರೋಪದಲ್ಲಿ ಜೈಲಿನಲ್ಲಿರುವ ಖಾಲಿದ್‌ಗೆ ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿದೆ.