ಕೋಲ್ಕತ್ತಾ: ಯಾವುದೇ ಶಕ್ತಿಯು ತಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಜ್ಯದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಶುಕ್ರವಾರ ಹೇಳಿದ್ದಾರೆ.
ಗುರುವಾರ ರಾತ್ರಿ ಇಮೇಲ್ ಮೂಲಕ ತಮಗೆ ಬಂದ ಜೀವ ಬೆದರಿಕೆಯನ್ನು ಉಲ್ಲೇಖಿಸಿದ ಬೋಸ್, ಇದು "ಬಂಗಾಳದ ಸಾಮಾನ್ಯ ಜನರಿಗಾಗಿ ನಾನು ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವ ಪ್ರಯತ್ನ" ಎಂದರು.
ನನಗೆ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ಬಂಗಾಳದ ಜನ ನನ್ನನ್ನು ರಕ್ಷಿಸುತ್ತಾರೆ. ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆಯೂ ಕೋಲ್ಕತ್ತಾದ ಬೀದಿಗಿಳಿಯುವುದಾಗಿ ಬೋಸ್ ಹೇಳಿದರು.
"ಇಂತಹ ಬೆದರಿಕೆಗಳ ಮೂಲಕ ಬಂಗಾಳದ ಜನರಿಗಾಗಿ ಕೆಲಸ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಬಂಗಾಳ ನನ್ನ ಮನೆ, ನಾನು ಬಂಗಾಳದ ಮಗ. ಈ ಭೂಮಿಗಾಗಿ ನನ್ನ ಪ್ರಾಣವನ್ನು ತ್ಯಜಿಸಲು ನಾನು ಹೆದರುವುದಿಲ್ಲ" ಎಂದು ಬೋಸ್ ಪಿಟಿಐಗೆ ತಿಳಿಸಿದ್ದಾರೆ.
"ನನಗೆ ಜೀವ ಬೆದರಿಕೆ ಎದುರಾಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಮುರ್ಷಿದಾಬಾದ್ ಪ್ರವಾಸದಲ್ಲಿ ಯಾರೋ ಜೀವಂತ ದೇಶಿ ನಿರ್ಮಿತ ಬಾಂಬ್ ಹಸ್ತಾಂತರಿಸಿದ್ದರು. ನನ್ನ ಎಡಿಸಿ ತಕ್ಷಣ ಅದನ್ನು ತೆಗೆದುಕೊಂಡು ಹೋಗಿ ನೀರಿನ ಟಬ್‌ನಲ್ಲಿ ಇಟ್ಟರು" ಎಂದು ಅವರು ಹೇಳಿದರು.
ನಿನ್ನೆ ರಾತ್ರಿ ಬೋಸ್ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ನಂತರ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಾಜ್ಯಪಾಲರನ್ನು "ಸ್ಫೋಟಿಸುವುದಾಗಿ" ಇಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ತ್ವರಿತವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಕೋಲ್ಕತ್ತಾ ಬಳಿಯ ಸಾಲ್ಟ್ ಲೇಕ್ ಪ್ರದೇಶದಿಂದ ಬೆದರಿಕೆ ಮೇಲ್ ಕಳುಹಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಲೋಕಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.