ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹಿರಿಯ ನಾಯಕ ಮತ್ತು ಮಾಜಿ ಸಂಸದ ಕೆ.ಸಿ. ತ್ಯಾಗಿ ಅವರು ಕೇಂದ್ರ ಸರ್ಕಾರ ಮನವಿ ಮಾಡಿದ್ದಾರೆ. ಆದರೆ ಆಡಳಿತರೂಢ ಜನತಾ ದಳ(ಯುನೈಟೆಡ್) ಮಾತ್ರ ತ್ಯಾಗಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಅವರ ಹೇಳಿಕೆ "ಪಕ್ಷದ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ" ಎಂದು ಶನಿವಾರ ಹೇಳಿದೆ.
ಈ ಸಂಬಂಧ ಕೆ.ಸಿ. ತ್ಯಾಗಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ನಿತೀಶ್ ಕುಮಾರ್ ಅವರನ್ನು "ಅಮೂಲ್ಯ ರತ್ನ" ಎಂದು ಬಣ್ಣಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಜೆಡಿ(ಯು) ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್, "ಇತ್ತೀಚಿನ ದಿನಗಳಲ್ಲಿ ಮಾಜಿ ಸಂಸದರು ಪಕ್ಷದ ಸಿದ್ಧಾಂತಕ್ಕೆ ಹೊಂದಿಕೆಯಾಗದ ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವು ಅಧಿಕೃತ ನಿಲುವಿಗೆ ಹೊಂದಿಕೆಯಾಗುವುದಿಲ್ಲ. ಅವರು ನೀಡಿದ ಎಲ್ಲಾ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಎಂದು ಪರಿಗಣಿಸಲಾಗುತ್ತದೆ" ಎಂದಿದ್ದಾರೆ.
ಪತ್ರದಲ್ಲಿ, ತ್ಯಾಗಿ ಅವರು, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಮತ್ತು ಎರಡು ಬಾರಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.