ತಿರುವನಂತಪುರಂ: ಕೇರಳ ಸರ್ಕಾರದ ‘ಮಲಯಾಳಂ ಭಾಷಾ ಮಸೂದೆ-2025’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಪತ್ರಕ್ಕೆ ಶನಿವಾರ ಸ್ಪಷ್ಟನೆ ನೀಡಿರುವ ಕೇರಳ ಸಿಎಂ, “ನಮ್ಮ ಸರ್ಕಾರ ಯಾವುದೇ ಭಾಷೆಯನ್ನು ಬಲವಂತವಾಗಿ ಹೇರುವ ಉದ್ದೇಶ ಹೊಂದಿಲ್ಲ. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮತ್ತು ಮಾಧ್ಯಮ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಮಸೂದೆಯ ಕುರಿತು ಎದ್ದಿರುವ ಊಹಾಪೋಹಗಳು ಸತ್ಯಕ್ಕೆ ದೂರವಾದವು ಎಂದು ಪ್ರತಿಪಾದಿಸಿದ್ದಾರೆ.
ಕೇರಳದ ಪ್ರಗತಿ ಯಾವಾಗಲೂ ಸಮಾನತೆ ಮತ್ತು ಸಹೋದರತ್ವದಲ್ಲಿ ನೆಲೆಗೊಂಡಿರುವ ಸಮಗ್ರ ಅಭಿವೃದ್ಧಿಯಲ್ಲಿ ಬೇರೂರಿದೆ. ಜಾತ್ಯತೀತತೆ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಮ್ಮ ಸರ್ಕಾರ ದೃಢವಾಗಿದೆ ಎಂದು ಕೇರಳ ಸಿಎಂ ತಿಳಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಕನ್ನಡ ಮತ್ತು ತಮಿಳು ಮಾತನಾಡುವ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಮಸೂದೆಯು ಸ್ಪಷ್ಟ ಮತ್ತು ನಿಸ್ಸಂದಿಗ್ಧವಾದ ಅನಿಯಂತ್ರಿತ ಷರತ್ತು(ಷರತ್ತು 7) ಅನ್ನು ಒಳಗೊಂಡಿದೆ. ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಲಾಗುವುದಿಲ್ಲ. ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಕೇರಳ ಸಿಎಂ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಂತೆಯೇ, ಮಲಯಾಳಂ ಮಾತೃಭಾಷೆಯಲ್ಲದ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಯನ್ನು ಕಲಿಯಲು ಮುಕ್ತ ಅವಕಾಶವಿದೆ. ಹೊರ ರಾಜ್ಯ ಅಥವಾ ವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ 9, 10ನೇ ತರಗತಿ ಅಥವಾ ಹೈಯರ್ ಸೆಕೆಂಡರಿ ಹಂತದಲ್ಲಿ ಮಲಯಾಳಂ ಪರೀಕ್ಷೆ ಬರೆಯುವುದು ಕಡ್ಡಾಯವಲ್ಲ ಎಂದು ಅವರು ಹೇಳಿದ್ದಾರೆ.