ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸೋಮವಾರ ಎರಡು ನಿಪಾ ವೈರಸ್ ಪ್ರಕರಣಗಳು ವರದಿಯಾಗಿವೆ. ಇಬ್ಬರು ನರ್ಸ್‌ಗಳಿಗೆ ನಿಪಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ(CCU) ಈ ಇಬ್ಬರು ನಿಪಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ 24 ಪರಗಣ ಜಿಲ್ಲಾ ಆರೋಗ್ಯ ಆಡಳಿತದ ಮೂಲಗಳ ಪ್ರಕಾರ, ಪೂರ್ವ ಬರ್ಧಮಾನ್ ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಯ 25 ಮತ್ತು 27 ವರ್ಷ ವಯಸ್ಸಿನ ಇಬ್ಬರು ರೋಗಿಗಳು ಜನವರಿ 6 ರಿಂದ CCU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರಂಭದಲ್ಲಿ, ಅವರು ತಲೆನೋವು, ಗಂಟಲು ನೋವು, ಪ್ರಜ್ಞಾಹೀನತೆ, ಸೆಳೆತ, ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಪೂರ್ವ ಬರ್ಧಮಾನ್ ಮತ್ತು ಪೂರ್ವ ಮಿಡ್ನಾಪುರ ಜಿಲ್ಲೆಗಳಲ್ಲಿರುವ ಸ್ಥಳೀಯ ರಾಜ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಜನವರಿ 6 ರಂದು, ಅವರ ಸ್ಥಿತಿ ಹದಗೆಟ್ಟ ನಂತರ ಅವರನ್ನು ಬರಾಸತ್‌ನಲ್ಲಿರುವ ಖಾಸಗಿ ಆಸ್ಪತ್ರೆಯ CCU ಗೆ ಸ್ಥಳಾಂತರಿಸಲಾಯಿತು ಎಂದು ಉತ್ತರ 24 ಪರಗಣ ಜಿಲ್ಲಾ ಆರೋಗ್ಯ ಆಡಳಿತದ ಮೂಲಗಳು ತಿಳಿಸಿವೆ.
ಉತ್ತರ 24 ಪರಗಣ ಜಿಲ್ಲೆಯ ಕಲ್ಯಾಣಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS) ಪ್ರಯೋಗಾಲಯದಲ್ಲಿ ಅವರ ಸೆರೆಬ್ರಲ್ ದ್ರವ ಮತ್ತು ಗಂಟಲಿನ ದ್ರವದ ಮಾದರಿಗಳಲ್ಲಿ ನಿಪಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.
"ರಾಜ್ಯದಲ್ಲಿ ಎರಡು ನಿಪಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಮತ್ತು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗವನ್ನು ತಡೆಗಟ್ಟಲು ತಕ್ಷಣವೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಈಗಾಗಲೇ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ" ಎಂದು ಸರ್ಕಾರಿ ವೈದ್ಯಕೀಯ ವೈದ್ಯರ ವೇದಿಕೆಯ ಕಾರ್ಯದರ್ಶಿ ಡಾ. ಉತ್ಪಲ್ ಬ್ಯಾನರ್ಜಿ ಅವರು ತಿಳಿಸಿದ್ದಾರೆ.
2001ರ ನಂತರ ಪಶ್ಚಿಮ ಬಂಗಾಳದಲ್ಲಿ ನಿಪಾ ವೈರಸ್ ಪೀಡಿತ ರೋಗಿಗಳು ವರದಿಯಾಗಿರುವುದು ಇದೇ ಮೊದಲು ಎಂದು ಡಾ. ಬ್ಯಾನರ್ಜಿ ಹೇಳಿದ್ದಾರೆ.