ಆಮ್ ಆದ್ಮಿ ಪಾರ್ಟಿ ಸಂಸದ ರಾಘವ್ ಚಡ್ಡಾ ಅವರು ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ನ ಸಪ್ಲೈ ಏಜೆಂಟ್ ಆಗಿ ಒಂದು ದಿನ ಕಳೆದ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಗಿಗ್ ಆರ್ಥಿಕತೆಯಲ್ಲಿ ಸುಧಾರಣೆಗಳು ಮತ್ತು ವಿತರಣಾ ಕಾರ್ಮಿಕರಿಗೆ ಉತ್ತಮ ಕೆಲಸದ ಪರಿಸ್ಥಿತಿಗೆ ಸರ್ಕಾರದ ಗಮನ ಸೆಳೆಯಲು ಹೀಗೆ ಮಾಡಿದ್ದಾರೆ.
ವಿತರಣಾ ಪಾಲುದಾರರು ಎದುರಿಸುತ್ತಿರುವ ದೈನಂದಿನ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ರಾಜ್ಯಸಭಾ ಸದಸ್ಯ ರಾಘವ್ ಚಡ್ಡ ಹೊಂದಿದ್ದರು. ಈ ಸಮಸ್ಯೆಯನ್ನು ಅವರು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿಯೂ ಎತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ನಲ್ಲಿ, ಚಡ್ಡಾ ಅವರು ಬ್ಲಿಂಕಿಟ್‌ನ ಹಳದಿ ಸಮವಸ್ತ್ರವನ್ನು ಧರಿಸಿ, ಹೆಲ್ಮೆಟ್ ಧರಿಸಿ ನಗರದಾದ್ಯಂತ ಆರ್ಡರ್‌ಗಳನ್ನು ಪೂರ್ಣಗೊಳಿಸುವಾಗ ವಿತರಣಾ ಏಜೆಂಟ್‌ನ ಮೋಟಾರ್‌ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡುವುದನ್ನು ಕಾಣಬಹುದು. ಅವರು ಕೆಲಸಗಾರನೊಂದಿಗೆ ಹೋಗಿ ಫುಡ್ ಡೆಲಿವರಿ ಮಾಡುತ್ತಿದ್ದಾರೆ.
ಗಿಗ್ ಕಾರ್ಮಿಕರ ಸಮಸ್ಯೆಗಳು
ಇತ್ತೀಚಿನ ತಿಂಗಳುಗಳಲ್ಲಿ ಆಪ್ ಸಂಸದ ರಾಘವ್ ಚಡ್ಡ ಗಿಗ್ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಗಿಗ್ ಕಾರ್ಮಿಕರ ವೇತನ, ಸುರಕ್ಷತೆ ಮತ್ತು ಉದ್ಯೋಗ ಭದ್ರತೆಯ ಬಗ್ಗೆ ಕಳವಳಗಳನ್ನು ಎತ್ತಿ ತೋರಿಸಲು ಅವರೊಂದಿಗೆ ಸಂದರ್ಶನಗಳನ್ನು ನಡೆಸಿದ್ದರು.
ಈ ತಿಂಗಳ ಆರಂಭದಲ್ಲಿ, ಚಡ್ಡ ಅವರು ತ್ವರಿತ ವಾಣಿಜ್ಯ ಮತ್ತು ಆಹಾರ ವಿತರಣಾ ವೇದಿಕೆಗಳ ವ್ಯವಹಾರ ಮಾದರಿಗಳನ್ನು ಟೀಕಿಸಿದ್ದರು. ಗಿಗ್ ಕಾರ್ಮಿಕರ ಇತ್ತೀಚಿನ ಮುಷ್ಕರಗಳ ಸಂದರ್ಭದಲ್ಲಿ ಜೊಮಾಟೊ ಮತ್ತು ಬ್ಲಿಂಕಿಟ್ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಹೇಳಿಕೆಗಳಿಗೆ ರಾಘವ್ ಚಡ್ಡ ಪ್ರತಿಕ್ರಿಯಿಸಿದ್ದರು.
ಭಾರತದಾದ್ಯಂತ ವಿತರಣಾ ಪಾಲುದಾರರು ಮೂಲಭೂತ ಘನತೆ, ನ್ಯಾಯಯುತ ವೇತನ, ಸುರಕ್ಷತೆ, ನಿಯಮಗಳು ಮತ್ತು ಸಾಮಾಜಿಕ ಭದ್ರತೆಗಾಗಿ ಮುಷ್ಕರ ನಡೆಸಿದರು. ನ್ಯಾಯಯುತ ವೇತನ ಕೇಳುವ ಕಾರ್ಮಿಕರು ಅಪರಾಧಿಗಳಲ್ಲ ಎಂದು ಬರೆದಿದ್ದಾರೆ.