ಗೋವಾ: ಗೂಗಲ್ ಮ್ಯಾಪ್. ಈ ಡಿಜಿಟಲ್ ದುನಿಯಾದಲ್ಲಿ ಗೂಗಲ್ ಮ್ಯಾಪ್ ಬಳಸದವರಿಲ್ಲ. ಹೊಸ ಊರಿಗೆ, ಹೊಸ ಜಾಗಕ್ಕೆ, ರೆಸ್ಟೋರೆಂಟ್ ಹುಡುಕಲು, ಅಡ್ರೆಸ್ ಹುಡುಕಲು ಹೀಗೆ ಪ್ರತಿಯೊಂದಕ್ಕೂ ಗೂಗಲ್ ಮ್ಯಾಪ್ ಮೇಲೆ ಡಿಪೆಂಡ್ ಆಗಿದ್ದಾರೆ. ಡೆಲಿವರಿ ಹುಡುಗರಿಂದ ಹಿಡಿದು ಪ್ರವಾಸಿಗರವರೆಗೂ ಎಲ್ಲರೂ ಬಳಸುತ್ತಾರೆ.
ಆದರೆ, ಇದೇ ಗೂಗಲ್ ಮ್ಯಾಪ್ ಹಲವರಿಗೆ ಸಂಕಷ್ಟವನ್ನೂ ತಂದೊಡ್ಡಿದೆ. ಹೌದು..ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಗೂಗಲ್ ಮ್ಯಾಪ್' ಸಂಕಷ್ಟಕ್ಕೆ ಸಿಲುಕಿ, ಕಗ್ಗತ್ತಲಲ್ಲಿ ಭಯಭೀತರಾಗಿದ್ದರು. ಈ ವೇಳೆ ರಾಪಿಡೊ ಚಾಲಕಿಯೊಬ್ಬರು ಅವರಿಗೆ ಸಮಾಧಾನ ಹೇಳಿ, ಅವರಿದ್ದ ಹೋಟೆಲ್'ಗೆ ಡ್ರಾಪ್ ಮಾಡಿದ್ದು, ಈ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
ಈ ಘಟನೆ ರಾತ್ರಿ ಸುಮಾರು 10 ಗಂಟೆ ವೇಳೆ ನಡೆದಿದ್ದು, ಗೂಗಲ್ ಮ್ಯಾಪ್ಸ್ ವಿಫಲವಾದ ಕಾರಣ ವಿದೇಶಿ ಮಹಿಳೆ ಬೀಚ್ ಬಳಿ ದಾರಿ ತಪ್ಪಿದ್ದಾಳೆ.
ಒಂಟಿಯಾಗಿದ್ದ ಆಕೆ ಭಯಭೀತಳಾಗಿದ್ದು, ಈ ವೇಳೆ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ ಮಹಿಳೆಯನ್ನು ಗಮನಿಸಿ ನೆರವಿಗೆ ಮುಂದಾಗಿದ್ದಾರೆ. ಆಕೆಗೆ ಧೈರ್ಯ ತುಂಬಿದ ಅವರು, ಹೋಟೆಲ್'ಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಹೋಟೆಲ್ ತಲುಪಿದ ನಂತರ ವಿದೇಶಿ ಮಹಿಳೆ ಸಿಂಧು ಕುಮಾರಿಯನ್ನು ಅಪ್ಪಿಕೊಂಡು ಕೃತಜ್ಞತೆ ವ್ಯಕ್ತಪಡಿಸುವ ದೃಶ್ಯಗಳು ಮನಮಿಡಿಯುವಂತಿವೆ. ಸಿಂಧು ತಮ್ಮ ಮಾತಿನಲ್ಲಿ, ಮಹಿಳೆ ಹೇಗೆ ದಾರಿ ತಪ್ಪಿದ್ದರು ಮತ್ತು ತಾವು ಏಕೆ ಸಹಾಯ ಮಾಡಲು ತೀರ್ಮಾನಿಸಿದರು ಎಂಬುದನ್ನು ವಿವರಿಸಿದ್ದಾರೆ.