ನವದೆಹಲಿ: ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ತನಿಖೆ ಮಾಡುವ ಮೊದಲು ಸರ್ಕಾರದ ಪೂರ್ವ ಅನುಮೋದನೆ ಕಡ್ಡಾಯಗೊಳಿಸುವ ಭ್ರಷ್ಟಾಚಾರ ವಿರೋಧಿ ಕಾನೂನಿನ 2018 ರ ನಿಬಂಧನೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ವಿಭಿನ್ನ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ.
2018 ರಲ್ಲಿ ಭ್ರಷ್ಟಾಚಾರ ತಡೆ(ಪಿಸಿ) ಕಾಯ್ದೆ, 1988 ರಲ್ಲಿ ಪರಿಚಯಿಸಲಾದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಗಸ್ಟ್ 6, 2025 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಇಂದು ನ್ಯಾಯಮೂರ್ತಿ ವಿಶ್ವನಾಥನ್ ಅವರು, ಕಾಯ್ದೆಯ ಸೆಕ್ಷನ್ 17ಎ ಅನ್ನು ಎತ್ತಿಹಿಡಿದರೆ, ಮತ್ತೊಂದೆಡೆ, ನ್ಯಾಯಮೂರ್ತಿ ನಾಗರತ್ನ ಅವರು ಈ ನಿಬಂಧನೆಯನ್ನು ರದ್ದುಗೊಳಿಸಲು ಅರ್ಹ ಎಂದು ಅಭಿಪ್ರಾಯಪಟ್ಟರು.
ಭಿನ್ನಾಭಿಪ್ರಾಯದ ತೀರ್ಪಿನ ನಂತರ, ಈ ವಿಷಯವನ್ನು ಈಗ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಮುಂದೆ ಇಡಲಾಗುವುದು. ಅವರು ಪ್ರಕರಣವನ್ನು ಹೊಸದಾಗಿ ವಿಚಾರಣೆ ಮಾಡಲು ವಿಸ್ತೃತ ಪೀಠ ನಿಯೋಜಿಸುತ್ತಾರೆ.
ತಮ್ಮ ತೀರ್ಪು ನೀಡುತ್ತಾ, ನ್ಯಾಯಮೂರ್ತಿ ನಾಗರತ್ನ ಅವರು ಈ ನಿಬಂಧನೆಯು "ಭ್ರಷ್ಟರನ್ನು ರಕ್ಷಿಸುವ" ಪ್ರಯತ್ನವಾಗಿದೆ ಎಂದು ಗಮನಿಸಿದರು.
"ಸೆಕ್ಷನ್ 17A ಅಸಂವಿಧಾನಿಕವಾಗಿದೆ ಮತ್ತು ಅದನ್ನು ರದ್ದುಗೊಳಿಸಬೇಕು. ಯಾವುದೇ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಈ ನಿಬಂಧನೆಯು ವಿನೀತ್ ನಾರಾಯಣ್ ಮತ್ತು ಸುಬ್ರಮಣಿಯನ್ ಸ್ವಾಮಿ ಅವರ ತೀರ್ಪುಗಳಲ್ಲಿ ಹಿಂದೆ ರದ್ದುಗೊಳಿಸಿರುವುದನ್ನು ನ್ಯಾಯಮೂರ್ತಿ ನಾಗರತ್ನ ಅವರು ಉಲ್ಲೇಖಿಸಿದರು".