ನವದೆಹಲಿ: ದೆಹಲಿಯಲ್ಲಿ ಮತ್ತೊಂದು ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಏರ್ ಇಂಡಿಯಾ ವಿಮಾನದ ಎಂಜಿನ್ ಗೆ ಲಗೇಜ್ ಸಿಲುಕಿ ಎಂಜಿನ್ ಹಾಳಾಗಿರುವ ಘಟನೆ ವರದಿಯಾಗಿದೆ.
ಇಂದು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವು ಲಗೇಜ್ ಕಂಟೇನರ್‌ಗೆ ಸಿಲುಕಿದ ನಂತರ ಅದರ ಒಂದು ಎಂಜಿನ್‌ಗೆ ಹಾನಿಯಾಗಿದೆ.
ಏರ್‌ಬಸ್ A350 ವಿಮಾನವು ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜಿನಲ್ಲಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ದೆಹಲಿ ಮತ್ತು ನ್ಯೂಯಾರ್ಕ್ ನಡುವೆ ಕಾರ್ಯನಿರ್ವಹಿಸುತ್ತಿದ್ದ AI101 ವಿಮಾನವು ಇರಾನ್ ವಾಯುಮಾರ್ಗವಾಗಿ ತೆರಳುತ್ತಿತ್ತು. ಆದರೆ ಸಂಘರ್ಷದ ಪರಿಣಾಮ ಇರಾನಿನ ವಾಯುಪ್ರದೇಶ ಮುಚ್ಚಿದ ಪರಿಣಾಮ ಅದು ವಿಮಾನ ನಿಲ್ದಾಣಕ್ಕೆ ಮರಳಿತ್ತು.
ವಿಮಾನ ದೆಹಲಿಯಲ್ಲಿ ಇಳಿಯುತ್ತಿದ್ದ ವೇಳೆ ಲಗೇಜ್ ಕಂಟೇನರ್ ಅನ್ನು ಎಂಜಿನ್ ಸೆಳೆದುಕೊಂಡು ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
"ದೆಹಲಿಯಿಂದ ನ್ಯೂಯಾರ್ಕ್ (JFK) ಗೆ ಕಾರ್ಯನಿರ್ವಹಿಸುತ್ತಿದ್ದ AI101 ವಿಮಾನವು ಇರಾನಿನ ವಾಯುಪ್ರದೇಶದ ಅನಿರೀಕ್ಷಿತ ಮುಚ್ಚಿದ್ದರಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿಗೆ ಹಿಂತಿರುಗಬೇಕಾಯಿತು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.
ಇದು ಅದರ ಯೋಜಿತ ಮಾರ್ಗದ ಮೇಲೆ ಪರಿಣಾಮ ಬೀರಿದೆ. ದೆಹಲಿಯಲ್ಲಿ ಇಳಿಯುವಾಗ, ದಟ್ಟವಾದ ಮಂಜಿನ ನಡುವೆ ಚಲಿಸುವಾಗ ವಿಮಾನದ ಎಂಜಿನ್ ಗೆ ಅಲ್ಲಿಯೇ ಇದ್ದ ವಿದೇಶಿ ಲಗೇಜ್ ಕಂಟೇನರ್ ಸಿಲುಕಿದೆ.
ಪಾರ್ಕಿಂಗ್ ಸಮಯದಲ್ಲಿ ದಟ್ಟವಾದ ಮಂಜಿನಿಂದಾಗಿ, ಲಗೇಜ್ ಕಂಟೇನರ್ ಗೋಚರಿಸಲಿಲ್ಲ. ಇದರಿಂದಾಗಿ, ಲಗೇಜ್ ಅನ್ನು ವಿಮಾನದ ಎಂಜಿನ್ ಸೆಳೆದುಕೊಂಡಿದೆ. ಈ ಕೂಡಲೇ ಎಂಜಿನ್ ಗೆ ಹಾನಿಯಾಗಿದೆ.
ಎಂಜಿನ್ ಫ್ಯಾನ್ ತಿರುಗುತ್ತಿದ್ದ ವೇಗಕ್ಕೆ ಸಿಲುಕಿ ಲಗೇಜ್ ಕಂಟೇನರ್ ಬಂದು ಎಂಜಿನ್ ಗೆ ಅಪ್ಪಳಿಸಿದ್ದು, ಈ ವೇಳೆ ಎಂಜಿನ್ ಗೆ ಗಂಭೀರ ಹಾನಿಯಾಗಿದೆ. ಬಳಿಕ ವಿಮಾನವನ್ನು ಗೊತ್ತು ಪಡಿಸಿದ ಪಾರ್ಕಿಂಗ್ ಜಾಗದಲ್ಲಿ ಸುರಕ್ಷಿತವಾಗಿ ಪಾರ್ಕ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಸುರಕ್ಷಿತ
ಇನ್ನು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಸಂಪೂರ್ಣ ತನಿಖೆ ಮತ್ತು ಅಗತ್ಯ ದುರಸ್ತಿಗಾಗಿ ವಿಮಾನವನ್ನು ಪಾರ್ಕ್ ಮಾಡಲಾಗಿದೆ. ಅಂತೆಯೇ ಪ್ರಯಾಣಿಕರಿಗೆ ಏರ್ ಇಂಡಿಯಾ ಮರುಪಾವತಿ ಬಗ್ಗೆ ಭರವಸೆ ನೀಡಿದ್ದು, ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದೆ.
"ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ ಮತ್ತು ಆದ್ಯತೆಯಂತೆ ಪರ್ಯಾಯ ಪ್ರಯಾಣ ವ್ಯವಸ್ಥೆ ಮತ್ತು ಮರುಪಾವತಿಗಳೊಂದಿಗೆ ಅವರಿಗೆ ಪೂರ್ವಭಾವಿಯಾಗಿ ಸಹಾಯ ಮಾಡುತ್ತಿದೆ. ಸುರಕ್ಷತೆಯು ಏರ್ ಇಂಡಿಯಾಕ್ಕೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಮತ್ತು ಈ ಸಮಯದಲ್ಲಿ ಬೆಂಬಲವನ್ನು ಒದಗಿಸಲು ವಿಮಾನಯಾನ ಸಂಸ್ಥೆ ಬದ್ಧವಾಗಿದೆ" ಎಂದು ಅದು ಹೇಳಿದೆ.
ಡಿಜಿಸಿಎ ತನಿಖೆ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಎಂಜಿನ್ ಒಳಗೆ ವಿದೇಶಿ ವಸ್ತು ಹೇಗೆ ಸಿಲುಕಿಕೊಂಡಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.