ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಗುರುವಾರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಮತ ಚಲಾಯಿಸಿದ ಬಳಿಕ ಮತದಾನದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಟ್ಟೆಯಲ್ಲಿನ ವ್ಯವಸ್ಥೆಗಳನ್ನು ಶ್ಲಾಘಿಸಿದರು. ಮತದಾನ ಮತ್ತು BMC ವ್ಯವಸ್ಥೆ ಕುರಿತು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಅಮೂಲ್ಯವಾದ ಮತಗಳನ್ನು ಖಂಡಿತವಾಗಿ ಚಲಾಯಿಸುವಂತೆ ನಾನು ಹೇಳುತ್ತೇನೆ BMC ಇಲ್ಲಿ ಉತ್ತಮ ವ್ಯವಸ್ಥೆಗಳನ್ನು ಮಾಡಿದೆ ಎಂದರು.
ಅಮೀರ್ ಖಾನ್ ಮರಾಠಿಯಲ್ಲಿ ಮಾತನಾಡುತ್ತಿದ್ದಂತೆ, ಕೆಲವು ಮಾಧ್ಯಮದವರು ಹಿಂದಿಯಲ್ಲಿ ಸಂದೇಶವನ್ನು ಪುನರಾವರ್ತಿಸುವಂತೆ ಕೇಳಿದರು.
ಆಗ ನಗುತ್ತಾ ಹೇಳಿದ ಅಮೀರ್ ಖಾನ್ "Hindi mein? ಇದು ಮಹಾರಾಷ್ಟ್ರ ಎಂದರು. ಆಗ ಪತ್ರಕರ್ತರೊಬ್ಬರು ತಮ್ಮ ಸಂದೇಶ ದೆಹಲಿಯಲ್ಲೂ ಪ್ರಸಾರ ಆಗುತ್ತೆ ಎಂದಾಗ, "ಓಹ್, ಅದು ದೆಹಲಿಗೂ ಹೋಗುತ್ತದೆಯೇ? ಉತ್ತಮ ವ್ಯವಸ್ಥೆ ಮಾಡಲಾಗಿದೆ, ನಾನು ಎಲ್ಲರಿಗೂ ಮನವಿ ಮಾಡುತ್ತೇನೆ: ಬಂದು ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಭಾಷೆ ಒಂದು ಸೂಕ್ಷ್ಮ ವಿಷಯವಾಗಿದ್ದು, BMC ಚುನಾವಣೆಯ ಸಂದರ್ಭದಲ್ಲಿಯೂ ಹಿಂದಿ vs ಮರಾಠಿ ಚರ್ಚೆಯು ಮರುಕಳಿಸಿದೆ. ಹಿಂದಿ ಭಾಷಿಕರೊಬ್ಬರು ಮುಂಬೈನ ಮೇಯರ್ ಆಗುತ್ತಾರೆ ಎಂಬ ಬಿಜೆಪಿ ನಾಯಕ ಕೃಪಾಶಂಕರ್ ಸಿಂಗ್ ಹೇಳಿಕೆಗೆ ಎರಡು ದಶಕಗಳ ನಂತರ ಮತ್ತೆ ಒಂದಾಗಿರುವ ಠಾಕ್ರೆ ಸಹೋದರರಾದ ಉದ್ಧವ್ ಮತ್ತು ರಾಜ್ ಠಾಕ್ರೆ ಅವರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಠಾಕ್ರೆಗಳು 'ಮರಾಠಿ ಮೇಯರ್ ಆಗಬೇಕು ಎಂದು ಹೇಳಿದ್ದಾರೆ. ಮರಾಠಿಗರು ವಿಭಜನೆಯಾಗಬಾರದು. ಅವರಿಗೆ ಇದು ಕೊನೆಯ ಚುನಾವಣೆ, ಇಂದು ಈ ಅವಕಾಶವನ್ನು ಕಳೆದುಕೊಂಡರೆ, ನೀವು ಮುಗಿದಂತೆ. ಮರಾಠಿ ಮತ್ತು ಮಹಾರಾಷ್ಟ್ರಕ್ಕಾಗಿ ಒಂದಾಗಬೇಕು.. ಹಲವಾರು ಜನರ ತ್ಯಾಗದಿಂದ ಮುಂಬೈ ಸಿಕ್ಕಿತು ಎಂದು ರಾಜ್ ಠಾಕ್ರೆ ಈ ಹಿಂದೆ ಹೇಳಿದ್ದರು.