ನವದೆಹಲಿ: ಇರಾನ್‌ನಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಲಭ್ಯವಿರುವ ಯಾವುದೇ ಸಾರಿಗೆ ವ್ಯವಸ್ಥೆಯ ಮೂಲಕ ದೇಶವನ್ನು ತೊರೆಯುವಂತೆ ಸಲಹೆ ನೀಡಿದ್ದು, ಸೂಚನೆ ಬೆನ್ನಲನ್ಲೇ ಭಾರತೀಯ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂತ ಹೆಚ್ಚಾಗಿದೆ.
ಇರಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆ ಮತ್ತು ಕೆಲ ವಿಶ್ವವಿದ್ಯಾಲಯಗಳು ಪಾಸ್‌ಪೋರ್ಟ್ ಹಿಂತಿರುಗಿಸಲು ನಿರಾಕರಿಸುತ್ತಿರುವ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಮಾರು 3,000ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಇರಾನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಇದರಲ್ಲಿ ಬಹುತೇಕರು ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಆಲ್ ಇಂಡಿಯಾ ಮೆಡಿಕಲ್ ಸ್ಟುಡೆಂಟ್ಸ್ ಅಸೋಸಿಯೇಷನ್ (AISMA), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಹಣಕಾಸಿನ ಅಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಅವರನ್ನು ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡುವಂತೆ ಆಗ್ರಹಿಸಿದೆ.
ಈ ನಡುವೆ ಇರಾನ್‌ಗೆ ಸಂಪರ್ಕ ಸಾಧಿಸುವ ಬಹುತೇಕ ಸಂವಹನ ಮಾರ್ಗಗಳು ಸ್ಥಗಿತಗೊಂಡಿರುವುದರಿಂದ ಪೋಷಕರು ತೀವ್ರ ಆತಂಕದಲ್ಲಿದ್ದಾರೆ.
AISMA ಉಪಾಧ್ಯಕ್ಷ ಡಾ. ಮೊಹಮ್ಮದ್ ಮೊಮಿನ್ ಖಾನ್ ಮಾತನಾಡಿ, “ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿಯೂ ಈಗ ಭಾರತಕ್ಕೆ ಹಿಂತಿರುಗಲು ಬಯಸುತ್ತಿದ್ದಾರೆ. ಕೆಲವರು ಕಣ್ಣೀರು ಹಾಕುತ್ತಾ ಕರೆ ಮಾಡಿದ್ದಾರೆ. ವಿಮಾನ ಟಿಕೆಟ್‌ಗೆ ಸುಮಾರು 30,000 ರೂ. ಬೇಕಾಗಿದೆ. ಪೋಷಕರು ಹಣ ಕಳುಹಿಸಲು ಸಿದ್ಧರಿದ್ದಾರೆ, ಆದರೆ ಇರಾನ್‌ಗೆ ಹಣ ವರ್ಗಾವಣೆ ಮಾಡುವ ಎಲ್ಲ ಮಾರ್ಗಗಳು ಬಂದ್ ಆಗಿವೆ. ಆದ್ದರಿಂದ ಪ್ರಧಾನಮಂತ್ರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ಶ್ರೀನಗರದ ಸರ್ಕಾರಿ ನೌಕರ ಅಗಾ ಮೆಹಮೂದ್ ಅವರ ಇಬ್ಬರು ಪುತ್ರಿಯರು ಇರಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
ಒಬ್ಬರು ತೆಹ್ರಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ತೃತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದರೆ, ಮತ್ತೊಬ್ಬರು ತೆಹ್ರಾನ್‌ನ ಶಾಹಿದ್ ಬಹೆಷ್ಟಿ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸಸ್ (SBUMS) ನಲ್ಲಿ ಓದುತ್ತಿದ್ದಾರೆ.
ವಿದೇಶಾಂಗ ಸಚಿವಾಲಯದ ಸಲಹೆ ಬಂದ ಬಳಿಕ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆತಂಕಗೊಂಡಿದ್ದಾರೆ. ನನ್ನ ಮಕ್ಕಳ ಬಳಿ ಟಿಕೆಟ್‌ಗಾಗಿ ಹಣ ಇದೆ, ಆದರೆ ಅನೇಕ ವಿದ್ಯಾರ್ಥಿಗಳ ಬಳಿ ಹಣವಿಲ್ಲ. ಪೋಷಕರು ಹಣ ನೀಡಲು ಸಿದ್ಧರಾಗಿದ್ದರೂ ಸಾಧ್ಯವಾಗುತ್ತಿಲ್ಲ, ಸರ್ಕಾರವೇ ಅವರ ಸುರಕ್ಷಿತ ವಾಪಸಿಗೆ ಸಹಕರಿಸಬೇಕು ಎಂದು ಮೆಹಮೂದ್ ಅವರು ಹೇಳಿದ್ದಾರೆ.
ಪಾಸ್‌ಪೋರ್ಟ್ ಅನ್ನು ವಿಶ್ವವಿದ್ಯಾಲಯದ ಮೂಲಕ ಇರಾನಿನ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಈಗ ಪರೀಕ್ಷೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಆದರೆ ವಿಶ್ವವಿದ್ಯಾಲಯವು ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸದೆ, ಜನವರಿ 20ರ ವರೆಗೆ ಪರೀಕ್ಷೆ ಮುಗಿಸಿ ನಂತರವೇ ಹೊರಡಬೇಕು ಎಂದು ಒತ್ತಾಯಿಸುತ್ತಿದೆ. ನನ್ನ ಮಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಇನ್ನೂ ಎಕ್ಸಿಟ್ ವೀಸಾ ಸಿಕ್ಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಾರಾಮುಲ್ಲಾದ ನಿವಾಸಿ ಸಿರಾಜುದ್ದೀನ್ ತಾಕ್ ಅವರ ಪುತ್ರ ಕೂಡ SBUMSನಲ್ಲಿ ತೃತೀಯ ವರ್ಷ ಓದುತ್ತಿದ್ದಾರೆ.
ನನ್ನ ಮಗ ಈಗಷ್ಟೇ ಕರೆ ಮಾಡಿದ್ದ. ಅವರಿಗೆ ವಾಪಸ್ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಸ್ಥಳೀಯ ಫೋನ್‌ಗಳ ಮೂಲಕ ಪೋಷಕರನ್ನು ಸಂಪರ್ಕಿಸುತ್ತಿದ್ದಾರೆ. ಪಾಸ್‌ಪೋರ್ಟ್ ಹಸ್ತಾಂತರ ಕುರಿತು ಭಾರತೀಯ ರಾಯಭಾರ ಕಚೇರಿ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ ಎಂಬ ಮಾಹಿತಿ ನನ್ನ ಮಗ ನೀಡಿದ್ದಾನೆಂದು ಹೇಳಿದ್ದಾರೆ.
ಭಾರತದಿಂದ ಇರಾನ್‌ಗೆ ನೇರ ವಿಮಾನ ಸೇವೆಗಳು ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಮಹಾನ್ ಏರ್ ಮೂಲಕ ಪ್ರಯಾಣಿಸುತ್ತಾರೆ ಎಂದು ಮತ್ತೊಬ್ಬ ಪೋಷಕರು ತಿಳಿಸಿದ್ದಾರೆ.