ಇಂದು ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಗೋವುಗಳಿಗೆ ಆಹಾರ ನೀಡಿ ಅರ್ಥಪೂರ್ಣವಾಗಿ ಪೊಂಗಲ್ ಆಚರಣೆ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಗೋವುಗಳಿಗೆ ಮೇವು ನೀಡಿ ಅವುಗಳ ಜತೆ ಸ್ವಲ್ಪ ಸಮಯ ಕಳೆದಿದ್ದಾರೆ. ಪ್ರಧಾನಿ ಮೋದಿ ಭಾರತೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಒಂದು ಸೂಚಕವಾಗಿ ಗೋಸೇವೆಯನ್ನು ಮಾಡಿದ್ದಾರೆ. ಇದರ ಫೋಟೋ ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ದೇಶದ ವಿವಿಧ ಕಡೆ ಇಂದು ಸಂಕ್ರಾಂತಿಯನ್ನು ವಿವಿಧ ಹೆಸರುಗಳಿಂದ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್ (Pongal) ಹಬ್ಬ ಎಂದು ಕರೆಯಲಾಗುತ್ತದೆ. ಇದು ಕೇವಲ ತಮಿಳು ಸಮುದಾಯದ ಹಬ್ಬವಲ್ಲ, ಪ್ರಪಂಚದಾದ್ಯಂತ ಎಲ್ಲರೂ ಉತ್ಸಾಹದಿಂದ ಆಚರಿಸುವ ಜಾಗತಿಕ ಹಬ್ಬವಾಗಿ ಹೊರಹೊಮ್ಮಿದೆ.
ಪ್ರಕೃತಿಯೊಂದಿಗೆ ಸಾಮರಸ್ಯದ ಸಮತೋಲನವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಈ ಹಬ್ಬ ತಿಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ನಿನ್ನೆ ಭಾಗವಹಿಸಿದ್ದ ಮೋದಿ, ಈ ಹಬ್ಬ ರೈತರ ಕಠಿಣ ಪರಿಶ್ರಮವನ್ನು ಆಚರಿಸುವುದರ ಜೊತೆಗೆ ಭೂಮಿ ಮತ್ತು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಎಂದು ವಿವರಿಸಿದರು.