ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನವರಿ 19 ರಂದು ನಾಮಪತ್ರ ಸಲ್ಲಿಸಲಾಗುತ್ತದೆ. ಮರುದಿನ ಪಕ್ಷದ ಹೊಸ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ತಿಳಿಸಿದೆ.
ಬಿಜೆಪಿ ರಾಷ್ಟ್ರೀಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಬಿಡುಗಡೆ ಮಾಡಿದ ಸಾಂಸ್ಥಿಕ ಚುನಾವಣಾ ವೇಳಾಪಟ್ಟಿಯ ಪ್ರಕಾರ, ಜನವರಿ 19 ರಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಪಕ್ಷದ ಮುಖ್ಯಸ್ಥರ ಆಯ್ಕೆಗೆ ನಾಮಪತ್ರ ಸಲ್ಲಿಸಬಹುದು, ಅದೇ ದಿನ ಸಂಜೆ 5 ರಿಂದ 6 ರವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯಬಹುದು.
ಅದೇ ದಿನ ಸಂಜೆ 4 ರಿಂದ 5 ರವರೆಗೆ ಅಭ್ಯರ್ಥಿಗಳ ನಾಮಪತ್ರಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ಜನವರಿ 20 ರಂದು ಅಗತ್ಯವಿದ್ದರೆ ಮತದಾನ ನಡೆಯಲಿದೆ, ಅದೇ ದಿನ ಹೊಸ ಚುನಾಯಿತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಲಕ್ಷ್ಮಣ್ ತಿಳಿಸಿದರು. ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಸಲಾಗುತ್ತದೆ.
ಪಕ್ಷದ ಮೂಲಗಳ ಪ್ರಕಾರ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಹೊಸ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಜೆ ಪಿ ನಡ್ಡಾ ಅವರು ಬಿಜೆಪಿ ಅಧ್ಯಕ್ಷರನ್ನಾಗಿ ನಬಿನ್ ಅವರನ್ನು ನೇಮಕ ಮಾಡುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕತ್ವವು ನಬಿನ್ ಅವರ ಉಮೇದುವಾರಿಕೆಗೆ ಬೆಂಬಲ ಸೂಚಿಸಿದ್ದಾರೆ.