ಮುಂಬೈ: ದೇಶದ ಅತ್ಯಂತ ದೊಡ್ಡ ಮಹಾನಗರ ಪಾಲಿಕೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಆಡಳಿತರೂಢ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ದೇಶದ ವಾಣಿಜ್ಯ ನಗರಿಯಲ್ಲಿ ತನ್ನ ಶಕ್ತಿಯನ್ನು ಮತ್ತಷ್ಟು ಕಳೆದುಕೊಂಡಿದ್ದು, 227 ಸ್ಥಾನಗಳಲ್ಲಿ ಕೇವಲ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ಕೆಳಮಟ್ಟಕ್ಕೆ ಇಳಿದಿದೆ.
ಬಿಎಂಸಿಯಲ್ಲಿ 2017 ರಲ್ಲಿ 31 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್, ಈ ಬಾರಿ 152 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉಳಿದ ಸ್ಥಾನಗಳನ್ನು ಮಿತ್ರಪಕ್ಷಗಳಾದ ವಂಚಿತ್ ಬಹುಜನ್ ಅಘಾಡಿ(ವಿಬಿಎ) ಮತ್ತು ರಾಷ್ಟ್ರೀಯ ಸಮಾಜ ಪಕ್ಷ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಗವಾಯಿ ಬಣ)ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು.
ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಿಬಿಎ, ಆರ್‌ಎಸ್‌ಪಿ ಮತ್ತು ಆರ್‌ಪಿಐ(ಗವಾಯಿ) ಜೊತೆಗಿನ ಮೈತ್ರಿ, ಕಾಂಗ್ರೆಸ್ ಕೈ ಬಲಪಡಿಸುವಲ್ಲಿ ವಿಫಲವಾಗಿದ್ದು, ಇದು ಕಾಂಗ್ರೆಸ್ ನ ಕಾರ್ಯತಂತ್ರದ ತಪ್ಪು ಹೆಜ್ಜೆಯಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಚುನಾವಣೆಗೆ ಮುನ್ನ, ಕಾಂಗ್ರೆಸ್ ತನ್ನ ಮಹಾ ವಿಕಾಸ್ ಅಘಾಡಿ ಪಾಲುದಾರರಾದ ಶಿವಸೇನೆ(ಯುಬಿಟಿ) ಮತ್ತು ಎನ್‌ಸಿಪಿ(ಎಸ್‌ಪಿ) ಜೊತೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿತು. ಶಿವಸೇನೆ(ಯುಬಿಟಿ) ಮತ್ತು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯೊಂದಿಗೆ ಕೈಜೋಡಿಸುವುದರಿಂದ ತನ್ನ ಉತ್ತರ ಭಾರತೀಯ ಮತ್ತು ಅಲ್ಪಸಂಖ್ಯಾತ ಮತ ಬ್ಯಾಂಕ್‌ಗಳನ್ನು ದೂರವಾಗಬಹುದು ಎಂದು ಕಾಂಗ್ರೆಸ್ ಭಾವಿಸಿತ್ತು. ಆದರೆ ಇದು ಕಾಂಗ್ರೆಸ್ ಗೆ ತಿರುಗುಬಾಣವಾದಂತೆ ಕಾಣುತ್ತಿದೆ. ಬಿಜೆಪಿ ಮರಾಠಿಯೇತರ ಹಿಂದೂ ಮತಗಳನ್ನು ಕ್ರೋಢೀಕರಿಸುವುದರೊಂದಿಗೆ ಮತ್ತು ಠಾಕ್ರೆ ಬಣಗಳು ಬಿಜೆಪಿ ವಿರೋಧಿ ಬೆಂಬಲವನ್ನು ಹಿಡಿದಿಟ್ಟುಕೊಂಡಿದ್ದರಿಂದ, ಕಾಂಗ್ರೆಸ್ ಮಧ್ಯದಲ್ಲಿ ಸಿಲುಕಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ.
ಅನೇಕ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ, ಭಾಷಾ ಮತ್ತು ಧಾರ್ಮಿಕ ಧ್ರುವೀಕರಣದಿಂದಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಎರಡರ ಮುಂದೆಯೂ ನೆಲೆ ಕಳೆದುಕೊಂಡಿದೆ.
ಕಾಂಗ್ರೆಸ್‌ನ ಸೋಲಿಗೆ ದೀರ್ಘಕಾಲದ ಆಂತರಿಕ ಕಲಹ ಮತ್ತು ಕ್ರಮಬದ್ಧ ಪ್ರಚಾರ ಕೊರತೆಯೇ ಕಾರಣ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.
ಬಿಜೆಪಿ ಮೂಲಸೌಕರ್ಯ ಅಭಿವೃದ್ಧಿಯನ್ನು ಹಾಗೂ ಠಾಕ್ರೆ ಸೋದರಸಂಬಂಧಿಗಳು ಮರಾಠಿ ಗುರುತಿನ ಮೇಲೆ ಹೈ-ಆಕ್ಟೇನ್ ಪ್ರಚಾರ ನಡೆಸಿದ್ದರು. ಆದರೆ ಕಾಂಗ್ರೆಸ್ ಬಿಎಂಸಿ ಚುನಾವಣೆಗೆ ಒಂದು ನಿರ್ಧಿಷ್ಟ ವಿಷಯವನ್ನು ಕಂಡುಹಿಡಿಯಲು ಹೆಣಗಾಡಿತು.
"ಮುಂಬೈನಲ್ಲಿ ಕಾಂಗ್ರೆಸ್ ಏಕೀಕೃತ ಶಕ್ತಿಯ ಬದಲು ವೈಯಕ್ತಿಕ ಪಾಕೆಟ್-ಬರೋಗಳ ಪಕ್ಷವಾಗಿದೆ" ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.
"ಆಡಳಿತರೂಢ ಬಿಜೆಪಿ ನೇತೃತ್ವದ ಮಹಾಯುತಿಯನ್ನು ಎದುರಿಸಲು ಯಾವುದೇ ಸ್ಪಷ್ಟ ನಾಯಕತ್ವ ಅಥವಾ 'ಎಲ್ಲರನ್ನೂ ವಿರೋಧಿಸುವುದನ್ನು' ಮೀರಿದ ವಿಶಿಷ್ಟ ಕಾರ್ಯಸೂಚಿಯಿಲ್ಲದೆ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳನ್ನು ಪಡೆಯುವಲ್ಲು ಸಹ ವಿಫಲವಾಗಿದೆ" ಎಂದು ಅವರು ತಿಳಿಸಿದ್ದಾರೆ.