ಮೊರಾದಾಬಾದ್: ಮುಸ್ಲಿಂ ಸ್ನೇಹಿತೆಯರ ಗುಂಪೊಂದು ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನ ಬಿಲಾರಿ ಪ್ರದೇಶದ ಸಾಹುಕುಂಜ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ಸಂಚಲನ ಮೂಡಿಸಿದೆ.
ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ಧರಿಸಿದ ಕೆಲವು ಹುಡುಗಿಯರು ಸರಳ ಉಡುಪಿನಲ್ಲಿರುವ ಹಿಂದೂ ಹುಡುಗಿಯನ್ನು ಬುರ್ಖಾ ಧರಿಸಲು ಒತ್ತಾಯಿಸುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಹುಡುಗಿ ನಿರಾಕರಿಸಿದಾಗ, ಅವರು "ಇದನ್ನು ಧರಿಸು, ಚೆನ್ನಾಗಿ ಕಾಣುತ್ತದೆ" ಎಂದು ಹೇಳುತ್ತಾರೆ.
ಈ ಮಧ್ಯೆ, ಹುಡುಗಿ "ಯಾರಾದರೂ ಬರುತ್ತೀರಾ?" ಎಂದು ಕೇಳುತ್ತಾಳೆ, ಅವಳಿಗೆ "ಯಾರೂ ಬರುತ್ತಿಲ್ಲ" ಎಂದು ಹೇಳುತ್ತಾರೆ. ಆಕೆಯ ಸ್ನೇಹಿತರು ಬುರ್ಖಾ ಧರಿಸಲು ಒತ್ತಾಯಿಸುತ್ತಾರೆ. ಈ ವೇಳೆ ಮತ್ತೋರ್ವ ಬುರ್ಖಾದಾರಿ ಮಹಿಳೆ ಬಂದಾಗ ಈಕೆ ಮುಂದಕ್ಕೆ ಸಾಗುತ್ತಾಳೆ.
ಟ್ಯೂಷನ್ ಆಡಳಿತ ಮಂಡಳಿ ಸ್ಫಷ್ಟನೆ
ಏತನ್ಮಧ್ಯೆ, ವಿದ್ಯಾರ್ಥಿನಿಯರ ಈ ಕೃತ್ಯ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಟ್ಯೂಷನ್ ಆಡಳಿತ ಮಂಡಳಿ ಸ್ಫಷ್ಟನೆ ನೀಡಿದೆ. ಇದು ಬುರ್ಖಾ ಧರಿಸಲು ಒತ್ತಾಯಿಸಿದ್ದಲ್ಲ.. ಬದಲಿಗೆ ವಿದ್ಯಾರ್ಥಿನಿಯರು ಗಲಾಟೆ ಮಾಡಿಕೊಂಡ ವಿಡಿಯೋ ಇದಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ತನಿಖೆ
ಇನ್ನು ಈ ಪ್ರಕರಣವನ್ನುಗಂಭೀರವಾಗಿ ತೆಗೆದುಕೊಂಡಿರುವ ಮೊರಾದಾಬಾದ್ ಪೊಲೀಸರು ವೈರಲ್ ವೀಡಿಯೊ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಕೋಮು ಸೌಹಾರ್ಧವಾತಾವರಣವನ್ನು ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಡಿಯೋ ಅಸಲೀಯತ್ತು
ಈ ವೀಡಿಯೊ ಡಿಸೆಂಬರ್ 20, 2025ರಂದು ಸೆರೆಯಾಗಿದ್ದು, ವೀಡಿಯೊ ಈಗ ಕೋಮು ಮತ್ತು ಸಾಮಾಜಿಕ ಚರ್ಚೆಯ ಕೇಂದ್ರವಾಗಿದೆ. ಈ ಘಟನೆಯು ವಸತಿ ಪ್ರದೇಶಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ತರಬೇತಿ ಕೇಂದ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಉದ್ದೇಶಪೂರ್ವಕ ಪಿತೂರಿಯಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಪೊಲೀಸರಿಗೆ ಮನವಿ
ಸಾಹು ಕುಂಜ್ ಕಾಲೋನಿಯ ಕೆಲವು ನಿವಾಸಿಗಳು ತಹಸಿಲ್ ಕಚೇರಿಯಲ್ಲಿ ಭೇಟಿಯಾದರು ಎಂದು ಎಸ್‌ಡಿಎಂ ವಿನಯ್ ಕುಮಾರ್ ಬಿಲಾರಿ ಹೇಳಿದ್ದಾರೆ. ಸಾಹು ಕುಂಜ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತಿ ಕೇಂದ್ರದ ಬಗ್ಗೆ ಅವರು ದೂರು ನೀಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳ ವರ್ತನೆಯ ಬಗ್ಗೆ ಜನರು ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು.
ವೈರಲ್ ವೀಡಿಯೊವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ವಿದ್ಯಾರ್ಥಿಗಳನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ತರಬೇತಿ ಕೇಂದ್ರದ ಹೊರಗೆ ವಿದ್ಯಾರ್ಥಿಗಳು ಸೃಷ್ಟಿಸಿದ ಗದ್ದಲಕ್ಕೆ ಕೆಲವರು ಧಾರ್ಮಿಕ ತಿರುವು ನೀಡಿದ್ದಾರೆ ಎಂದು ಎಸ್‌ಡಿಎಂ ಹೇಳುತ್ತದೆ.