ಲಖನೌ: ವಾರಣಾಸಿಯಲ್ಲಿ ಯಾವುದೇ ದೇವಸ್ಥಾನವನ್ನು ಕೆಡವಿಲ್ಲ ಎಂದು ಸ್ಪಷ್ಟಪಡಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಕಾಂಗ್ರೆಸ್ ಕಾಶಿಯ ಹೆಸರು ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ.
ಮಣಿಕರ್ಣಿಕಾ ಘಾಟ್ ನವೀಕರಣದ ಸಮಯದಲ್ಲಿ ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ಕಾಂಗ್ರೆಸ್ ಕಾಶಿಗೆ ಕಳಂಕ ತರಲು ಯತ್ನಿಸುತ್ತಿದೆ. ಪ್ರತಿಮೆಯನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ ಎಂದು ಯೋಗಿ ಹೇಳಿದ್ದಾರೆ.
ಮಣಿಕರ್ಣಿಕಾ ಘಾಟ್ ನವೀಕರಣ ಮತ್ತು ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ವಿಗ್ರಹ ಧ್ವಂಸಗೊಳಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಅಲ್ಲದೆ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂಬಂಧ ಕಾಂಗ್ರೆಸ್ ವಿರುದ್ಧ ತೀವ್ರ ದಾಳಿ ನಡೆಸಿದ ಸಿಎಂ ಯೋಗಿ, ಈ ವಿವಾದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿದರು.
ವಿವಾದದ ನಂತರ ಇಂದು ವಾರಣಾಸಿಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಅವರು, ಮರಾಠಾ ರಾಣಿಯ ಪ್ರತಿಮೆಯನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೋವನ್ನು ಸೃಷ್ಟಿಸಿ ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಆರೋಪಿಸಿದರು.
"ಇದು ಕಾಶಿಯ ಹೆಸರು ಕೆಡಿಸುವ ಸಂಚು, ಆದ್ದರಿಂದ ಈ ವಿಷಯವನ್ನು ಚರ್ಚಿಸಲು ಮತ್ತು ವಿವಾದದ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳನ್ನು ಬಯಲು ಮಾಡಲು ನಾನು ಇಲ್ಲಿಗೆ ವೈಯಕ್ತಿಕವಾಗಿ ಬರಬೇಕಾಯಿತು" ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.