ಮುಂಬೈ: ಇತ್ತೀಚಿಗೆ ಮುಕ್ತಾಯಗೊಂಡ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಹಲವು ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದು, ಪರ್ಭಾನಿ ಮುನ್ಸಿಪಲ್ ಕಾರ್ಪೊರೇಷನ್‌ನ ವಾರ್ಡ್ 1A ನಲ್ಲಿ ಶಿವಸೇನೆ-ಯುಬಿಟಿ ಅಭ್ಯರ್ಥಿ ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಸೇನಾ-ಯುಬಿಟಿ ಪಕ್ಷದ ಅಭ್ಯರ್ಥಿ ವ್ಯಂಕತ್ ದಹಲೆ ಅವರು 4312 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಬಿಜೆಪಿಯ ಪ್ರಸಾದ್ ನಗರೆ ಅವರು 4311 ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಶಿವಸೇನೆ ಅಭ್ಯರ್ಥಿ ಮೋಹನ್ ಸೋನಾವಾನೆ ಅವರು ಈ ವಾರ್ಡ್‌ನಲ್ಲಿ 1363 ಮತಗಳನ್ನು ಪಡೆದರೆ, 113 ಮತದಾರರು NOTA ಆಯ್ಕೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪರ್ಭಾನಿ ಮರಾಠವಾಡದಲ್ಲಿರುವ ಏಕೈಕ ಪುರಸಭೆಯಾಗಿದ್ದು, ಶಿವಸೇನೆ-ಯುಬಿಟಿ ಭಾರತೀಯ ಜನತಾ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಪರ್ಭಾನಿಯಲ್ಲಿ ಶಿವಸೇನೆ-ಯುಬಿಟಿ 25 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ಕೇವಲ 12 ಸ್ಥಾನಗಳನ್ನು ಗೆದ್ದಿದೆ.
ಮಹಾರಾಷ್ಟ್ರದಾದ್ಯಂತ ಒಟ್ಟು 29 ಪುರಸಭೆಗಳಿಗೆ ಜನವರಿ 15 ರಂದು ಚುನಾವಣೆ ನಡೆದಿತ್ತು ಮತ್ತು ಜನವರಿ 16 ರಂದು ಫಲಿತಾಂಶ ಪ್ರಕಟಿಸಲಾಯಿತು.