ಹೂಗ್ಲಿ: ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ಮತ ಬ್ಯಾಂಕ್ ರಾಜಕೀಯಕ್ಕಾಗಿ "ನುಸುಳುಕೋರರಿಗೆ ಸಹಾಯ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದ್ದಾರೆ.
ಇಂದು ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕೆ ದಾರಿ ಮಾಡಿಕೊಡಲು ಪಶ್ಚಿಮ ಬಂಗಾಳದಲ್ಲಿ "ಮಹಾ ಜಂಗಲ್ ರಾಜ್" ಅನ್ನು ಕೊನೆಗೊಳಿಸುವ ಅಗತ್ಯ ಇದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಗಡಿ ಬೇಲಿ ನಿರ್ಮಾಣ ಸೇರಿದಂತೆ ನಿರ್ಣಾಯಕ ಭದ್ರತಾ ಕ್ರಮಗಳಲ್ಲಿ ಕೇಂದ್ರದೊಂದಿಗೆ ಸಹಕರಿಸಲು ರಾಜ್ಯ ಸರ್ಕಾರ "ವಿಫಲವಾಗಿದೆ" ಎಂದು ಪ್ರಧಾನಿ ಮೋದಿ, ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ರಾಜ್ಯದ ಪ್ರತಿಯೊಬ್ಬರೂ 15 ವರ್ಷಗಳ ಟಿಎಂಸಿಯ "ಮಹಾ ಜಂಗಲ್ ರಾಜ್" ಅನ್ನು ಬದಲಾಯಿಸಲು ಬಯಸಿದ್ದಾರೆ ರಾಜ್ಯದ ಜನ "ದುರ್ಬಲ ಆಡಳಿತದಿಂದ ಬೇಸತ್ತಿದ್ದಾರೆ" ಮತ್ತು ಟಿಎಂಸಿಯನ್ನು ಅಧಿಕಾರದಿಂದ ಕಿತ್ತುಹಾಕಲು ಬಯಸಿದ್ದಾರೆ" ಎಂದು ಮೋದಿ ಹೇಳಿದರು.
"ನಕಲಿ ದಾಖಲೆಗಳೊಂದಿಗೆ ಬಂಗಾಳದಲ್ಲಿ ವಾಸಿಸುವ ನುಸುಳುಕೋರರನ್ನು ಗುರುತಿಸಿ ಅವರ ದೇಶಗಳಿಗೆ ವಾಪಸ್ ಕಳುಹಿಸಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದಿಂದ ಅಕ್ರಮ ವಲಸಿಗರನ್ನು ಹೊರಹಾಕುವುದನ್ನು ಖಚಿತಪಡಿಸುತ್ತದೆ" ಎಂದರು.
ಗಡಿಗೆ ಬೇಲಿ ಹಾಕಲು ಭೂಮಿ ಕೋರಿ ಕೇಂದ್ರ ಸರ್ಕಾರವು ಹಲವಾರು ವರ್ಷಗಳಿಂದ ಟಿಎಂಸಿ ಸರ್ಕಾರಕ್ಕೆ ಪತ್ರ ಬರೆದಿದೆ; ಆದರೆ, ರಾಜ್ಯ ಸರ್ಕಾರವು ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮೋದಿ ಆರೋಪಿಸಿದರು.
ನಾನು ಬಂಗಾಳದ ಜನರ ಸೇವೆ ಮಾಡಲು ಬಯಸುತ್ತೇನೆ. ಆದರೆ ಟಿಎಂಸಿ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಬಂಗಾಳದ ಜನರಿಗೆ ತಲುಪದಂತೆ ತಡೆಯುತ್ತಿದೆ ಎಂದು ಮೋದಿ ದೂರಿದರು.
"ರಾಜ್ಯದ ಅಭಿವೃದ್ಧಿಗಾಗಿ ಬಂಗಾಳಕ್ಕೂ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬೇಕು" ಎಂದು ಮೋದಿ ಹೇಳಿದರು.