ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಸಿಂಗ್‌ಪೋರಾ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ಆರಂಭಿಸಿದ್ದು, ಸ್ಥಳದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಪಾಕಿಸ್ತಾನ ಬೆಂಬಲಿತ ಜೈಶ್-ಇ-ಮೊಹಮ್ಮದ್ (Jaish-e-Mohammad) ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರು ಅಡಗಿಕುಳಿತಿದ್ದು, ಉಗ್ರರನ್ನು ಭದ್ರತಾ ಪಡೆಗಳು ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ.ಈ ನಡುವೆ ಯೋಧರ ಮೇಲೆ ಉಗ್ರರು ಗ್ರೆನೇಡ್‌ಗಳನ್ನು ಎಸೆದಿದ್ದು, ಪರಿಣಾಮ 8 ಮಂದಿ ಸೈನಿಕರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಭದ್ರತಾ ಪಡೆಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಸ್ಥಳದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸುತ್ತಿತ್ತು. ಶೋಧ ಕಾರ್ಯಾಚರಣೆಯ ಸಮಯದಲ್ಲಿ ಕಿಶ್ತ್ವಾರ್ ಜಿಲ್ಲೆಯ ಛಾತ್ರುವಿನ ಈಶಾನ್ಯದಲ್ಲಿರುವ ಸಾಮಾನ್ಯ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವುದು ಖಚಿತವಾಗಿತ್ತು. ಈ ವೇಳೆ ಭದ್ರತಾಪಡೆಗಳು ಸ್ಥಳವನ್ನು ಸುತ್ತುವರೆದು ಎನ್ಕೌಂಟರ್ ಆರಂಭಿಸಿತು.
ಹಲವಾರು ಗಂಟೆಗಳ ಕಾಲ ಉಗ್ರರು ಹಾಗೂ ಭದ್ರತಾಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ನಂತರ ಉಗ್ರರು ಯೋಧರ ಬಳಿಕೆ ಗ್ರೆನೇಡ್ ಎಸೆದಿದ್ದಾರೆಂದು ತಿಳಿದುಬಂದಿದೆ.
ಸ್ಥಳದಲ್ಲಿ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೋರಿ 2-3 ವಿದೇಶಿ ಉಗ್ರರ ಗುಂಪು ಇರುವುದು ಖಚಿತವಾಗಿದ್ದು, ಇದೀಗ ಹೆಚ್ಚುವರಿ ಭದ್ರತಾಪಡೆಗಳು ಸ್ಥಳಕ್ಕೆ ತೆರಳಿ ಉಗ್ರರಿಗೆ ದಿಟ್ಟ ಉತ್ತರ ನೀಡುತ್ತಿದ್ದಾರೆ. ಇನ್ನು ಗಾಯಗೊಂಡಿರುವ ಯೋಧರನ್ನು ಸೈನಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.