ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ಸೋಮವಾರ ಪ್ರಕಟಿಸಿದ್ದಾರೆ.
ಇತ್ತೀಚಿಗಷ್ಟೇ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಹಾರ ಬಿಜೆಪಿ ಶಾಸಕ ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಬಿನ್ ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ ಮತ್ತು ಎಲ್ಲಾ ನಾಮಪತ್ರಗಳು ಮಾನ್ಯವಾಗಿವೆ ಎಂದು ಕೆ. ಲಕ್ಷ್ಮಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಬಿನ್ ಅವರ ಉಮೇದುವಾರಿಕೆಯನ್ನು ಸೂಚಿಸಿದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರಾಗಿದ್ದಾರೆ. ಪಕ್ಷದ ಮುಖ್ಯಸ್ಥ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರು ನಬಿನ್ ಉಮೇದುವಾರಿಕೆಯನ್ನು ಬೆಂಬಲಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಇಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಂಜೆ 4 ರಿಂದ 5 ರವರೆಗೆ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಸಂಜೆ 5 ರಿಂದ 6 ರವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ನಬಿನ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
"ಒಟ್ಟಾರೆಯಾಗಿ, ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಿತಿನ್ ನಬಿನ್ ಅವರ ಪರವಾಗಿ 37 ಸೆಟ್ ನಾಮಪತ್ರಗಳು ಬಂದಿವೆ. ಪರಿಶೀಲನೆಯ ಸಮಯದಲ್ಲಿ, ಎಲ್ಲಾ ಸೆಟ್ ನಾಮಪತ್ರಗಳು ಅಗತ್ಯ ಸ್ವರೂಪದಲ್ಲಿ ಭರ್ತಿಯಾಗಿವೆ ಮತ್ತು ಮಾನ್ಯವಾಗಿವೆ" ಎಂದು ಅವರು ಹೇಳಿದರು.
"ಈಗ, ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ನಂತರ, ನಿತಿನ್ ನಬಿನ್ ಅವರ ಹೆಸರನ್ನು ಮಾತ್ರ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ" ಎಂದು ಭಾರತೀಯ ಜನತಾ ಪಕ್ಷದ ಸಂಗಥನ್ ಪರ್ವ್‌ನ ರಾಷ್ಟ್ರೀಯ ಚುನಾವಣಾ ಅಧಿಕಾರಿಯಾಗಿ ನಾನು ಈ ಮೂಲಕ ಘೋಷಿಸುತ್ತೇನೆ ಎಂದು ಲಕ್ಷ್ಮಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.