ಮುಂಬೈ: ಇತ್ತೀಚಿಗೆ ನಡೆದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಹಾಯುತಿಯಲ್ಲಿ ಈಗ ಮೇಯರ್ ಪಟ್ಟಕ್ಕಾಗಿ ಫೈಟ್ ಆರಂಭವಾಗಿದೆ.
ಶಿವಸೇನೆಯಿಂದ ಮೇಯರ್ ಆದ್ರೆ ಬಾಳಾ ಠಾಕ್ರೆ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರಿಗೆ ನೀಡುವ ಗೌರವ ಎಂದು ಶಿವಸೈನಿಕರ ಒಂದು ವರ್ಗ ನಂಬುತ್ತದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ.
ಮೇಯರ್ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಶಿವಸೇನೆ ಮಿತ್ರಪಕ್ಷ ಭಾರತೀಯ ಜನತಾ ಪಕ್ಷದೊಂದಿಗೆ ವಾಗ್ವಾದ ನಡೆಸುತ್ತಿದೆ ಎಂಬ ವರದಿಗಳ ನಡುವೆಯೇ ಶಿಂಧೆ ಅವರು ಈ ಹೇಳಿಕೆ ನೀಡಿದ್ದಾರೆ.
ಕಳೆದ ವಾರ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಹೊಸ ರಾಜಕೀಯ ಸಮೀಕರಣಗಳ ವರದಿಗಳನ್ನು ತಳ್ಳಿಹಾಕಿದ ಶಿಂಧೆ, ಮುಂಬೈನಲ್ಲಿ ಮಹಾಯುತಿ ಮೇಯರ್ ಇರುತ್ತಾರೆ ಎಂದು ಒತ್ತಿ ಹೇಳಿದರು.
ಅದೇ ರೀತಿ, ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಹಾನಗರ ಪಾಲಿಕೆಗಳಲ್ಲಿ ಮಹಾಯುತಿ ಮೈತ್ರಿಕೂಟದ ಮೇಯರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
"ಬಾಳಾಸಾಹೇಬ್ ಠಾಕ್ರೆ ಅವರ ಜನ್ಮ ಶತಮಾನೋತ್ಸವ ವರ್ಷವು ಜನವರಿ 23 ರಿಂದ ಪ್ರಾರಂಭವಾಗುತ್ತದೆ. ಕೆಲವು ಶಿವಸೈನಿಕರು(ಪಕ್ಷದ ಕಾರ್ಯಕರ್ತರು) ಬಿಎಂಸಿಯಲ್ಲಿ ಶಿವಸೇನಾ ಮೇಯರ್ ಅನ್ನು ಸ್ಥಾಪಿಸಬೇಕು ಎಂಬ ಭಾವನೆ ಹೊಂದಿದ್ದಾರೆ" ಎಂದು ಅವರು ಹೇಳಿದರು.
ಈ ಹೇಳಿಕೆ ನೀಡುವ ಮೂಲಕ ಏಕನಾಥ್ ಶಿಂಧೆ ಅವರು ಪರೋಕ್ಷವಾಗಿ ಮುಂಬೈ ಮೇಯರ್ ಹುದ್ದೆಗೆ ಹಕ್ಕು ಮಂಡಿಸುತ್ತಿದ್ದಾರೆ.