ನವದೆಹಲಿ: ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ನೀಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ವಿಷಯದ ಕುರಿತು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಟೀಕಿಸಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಮೇನಕಾ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ನ್ಯಾಯಾಲಯವೂ ಘೋಷಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಮಾಜಿ ಸಚಿವೇ ಯೋಚಿಸದೆ ಎಲ್ಲರ ವಿರುದ್ಧ 'ಎಲ್ಲಾ ರೀತಿಯ ಕಾಮೆಂಟ್‌ಗಳನ್ನು' ಮಾಡಿದ್ದಾರೆ ಎಂದು ಹೇಳಿದೆ.
ಮೇನಕಾ ಗಾಂಧಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರನ್ನು ಪ್ರಶ್ನಿಸಿದ ಪೀಠವು, ನ್ಯಾಯಾಲಯವು ತನ್ನ ಆದೇಶಗಳಲ್ಲಿ ಜಾಗರೂಕರಾಗಿರಬೇಕು ಎಂದು ನೀವು ಹೇಳಿದ್ದೀರಿ, ಆದರೆ ಅವರು ಯಾವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನೀವು ನಿಮ್ಮ ಕಕ್ಷಿದಾರರನ್ನು ಕೇಳಿದ್ದೀರಾ? ನೀವು ಅವರ ಪಾಡ್‌ಕ್ಯಾಸ್ಟ್ ಅನ್ನು ಕೇಳಿದ್ದೀರಾ? ಅವರು ಯೋಚಿಸದೆ ಎಲ್ಲರ ವಿರುದ್ಧ ಎಲ್ಲಾ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೀವು ಅವರ ದೇಹ ಭಾಷೆಯನ್ನು ಗಮನಿಸಿದ್ದೀರಾ? ಎಂದು ಪ್ರಶ್ನಿಸಿತ್ತು. ಅಲ್ಲದೆ ನ್ಯಾಯಾಲಯದ ಔದಾರ್ಯದಿಂದಾಗಿ ಮಾಜಿ ಕೇಂದ್ರ ಸಚಿವೆಯ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಲ್ಲ ಎಂದು ಪೀಠ ಹೇಳಿದೆ.
ಕೇಂದ್ರದ ಮಾಜಿ ಸಚಿವೆಯಾಗಿ ಮೇನಕಾ ಗಾಂಧಿ ಬೀದಿ ನಾಯಿ ಸಮಸ್ಯೆಯನ್ನು ಪರಿಹರಿಸಲು ಬಜೆಟ್ ಹಂಚಿಕೆಗಳನ್ನು ಪಡೆಯಲು ಎಷ್ಟು ಕೊಡುಗೆ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಮೆಹ್ತಾ ರಾಮಚಂದ್ರನ್ ಅವರನ್ನು ಕೇಳಿದರು. ಭಯೋತ್ಪಾದಕ ಅಜ್ಮಲ್ ಕಸಬ್ ಪರವೂ ತಾವು ವಕಾಲತ್ತು ವಹಿಸಿರುವುದಾಗಿ ರಾಮಚಂದ್ರನ್ ಪ್ರತಿಕ್ರಿಯಿಸಿದ್ದು ಇದಕ್ಕೆ ನ್ಯಾಯಮೂರ್ತಿಗಳು, ಅಜ್ಮಲ್ ಕಸಬ್ ನ್ಯಾಯಾಂಗ ನಿಂದನೆ ಎಸಗಿಲ್ಲ ಆದರೆ ನಿಮ್ಮ ಕಕ್ಷಿದಾರರೇ ಹಾಗೆ ಮಾಡಿದ್ದಾರೆ ಎಂದು ಟೀಕಿಸಿದರು.
ಜನವರಿ 13ರಂದು ಸುಪ್ರೀಂ ಕೋರ್ಟ್, ನಾಯಿ ಕಡಿತದ ಘಟನೆಗಳಿಗೆ "ಭಾರಿ ಪರಿಹಾರ" ಪಾವತಿಸಲು ಮತ್ತು ಅಂತಹ ಪ್ರಕರಣಗಳಿಗೆ ನಾಯಿ ಸಾಕುವವರನ್ನು ಹೊಣೆಗಾರರನ್ನಾಗಿ ಮಾಡಲು ರಾಜ್ಯಗಳಿಗೆ ಸೂಚಿಸಿತ್ತು. ಅಲ್ಲದೆ ಕಳೆದ ಐದು ವರ್ಷಗಳಿಂದ ಬೀದಿ ಪ್ರಾಣಿಗಳ ನಿಯಮಗಳನ್ನು ಜಾರಿಗೊಳಿಸದಿರುವ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.