ನವದೆಹಲಿ: ಬಿಜೆಪಿ ಕೇವಲ ರಾಜಕೀಯ ಸಂಘಟನೆಯಲ್ಲ, ಬದಲಾಗಿ ಒಂದು ಆಂದೋಲನ ಎಂದು ಬಣ್ಣಿಸಿರುವ ಕೇಸರಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು, "ಸಂಘಟನೆ ಕೇವಲ ಒಂದು ವ್ಯವಸ್ಥೆಯಲ್ಲ, ಪವಿತ್ರ ಸಂಪ್ರದಾಯ" ಎಂದು ಮಂಗಳವಾರ ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಸ್ವಲ್ಪ ಸಮಯದ ನಂತರ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಿತಿನ್, ಪ್ರಧಾನಿ ನರೇಂದ್ರ ಮೋದಿ, ನಿರ್ಗಮಿತ ಅಧ್ಯಕ್ಷ ಜೆ ಪಿ ನಡ್ಡಾ, ಹಿರಿಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಮಾಡಿದ ಸಂಕಲ್ಪವನ್ನು ಸಾಕಾರಗೊಳಿಸಲು ನಾವು ಸಂಪೂರ್ಣ ಏಕತೆ ಮತ್ತು ಬದ್ಧತೆಯೊಂದಿಗೆ ದೃಢವಾಗಿರುತ್ತೇವೆ" ಎಂದು ನಬಿನ್ ಹೇಳಿದ್ದಾರೆ.
ಪ್ರಮುಖ ಹುದ್ದೆಗಳು ಮತ್ತು ದೊಡ್ಡ ಜವಾಬ್ದಾರಿಗಳನ್ನು ಹೊಂದಲು ಯಾವುದೇ ನಿರ್ದಿಷ್ಟ ಕುಟುಂಬಕ್ಕೆ ಸೇರಬೇಕಾಗಿಲ್ಲದ ಏಕೈಕ ಪಕ್ಷ ಬಿಜೆಪಿ ಎಂದು ನೂತನ ಅಧ್ಯಕ್ಷರು ಹೇಳಿದ್ದಾರೆ.
ಬಿಜೆಪಿಯು ತಳಮಟ್ಟದ ಕಾರ್ಯಕರ್ತರಿಗೆ ನೀಡುತ್ತಿರುವ ಮಹತ್ವವನ್ನು ಎತ್ತಿ ತೋರಿಸುತ್ತಾ, "ಇಲ್ಲಿ, ಸಾಮಾನ್ಯ ಕಾರ್ಯಕರ್ತನಾಗಿರುವುದು ಅತ್ಯಂತ ದೊಡ್ಡ ಅರ್ಹತೆ. ಈ ಸಂಸ್ಥೆಯಲ್ಲಿಯೇ, ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬರು ದೇಶದ ಪ್ರಧಾನಿಯಾಗಬಹುದು ಮತ್ತು ಸಾಮಾನ್ಯ ಕಾರ್ಯಕರ್ತ ರಾಷ್ಟ್ರೀಯ ಅಧ್ಯಕ್ಷರಾಗಬಹುದು" ಎಂದು ಹೇಳಿದರು.
"ಪಕ್ಷದ ಹಿರಿಯರು ಮತ್ತು ಕೋಟ್ಯಂತರ ಕಾರ್ಯಕರ್ತರ ಅಚಲ ನಂಬಿಕೆ ಮತ್ತು ಅಪಾರ ಬೆಂಬಲದಿಂದಾಗಿ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳಲು ಸಾಧ್ಯವಾಗಿದೆ. ಇದು ಬಿಜೆಪಿಯ ಆತ್ಮ, ಮತ್ತು ಇದು ಮೂಲಭೂತವಾಗಿ ಇತರ ರಾಜಕೀಯ ಪಕ್ಷಗಳಿಗಿಂತ ಬಿನ್ನವಾಗಿದೆ" ಎಂದು ಅವರು ಹೇಳಿದರು.
"ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಕೇವಲ ಕಾರ್ಯಕರ್ತನಲ್ಲ; ರಾಷ್ಟ್ರ ನಿರ್ಮಾಣದ ಸೈನಿಕರು. ನಿಮ್ಮ ಹೋರಾಟ, ನಿಮ್ಮ ನಿಷ್ಠೆ ಮತ್ತು ನಿಮ್ಮ ಕಠಿಣ ಪರಿಶ್ರಮವು ಭಾರತದ ಉಜ್ವಲ ಭವಿಷ್ಯಕ್ಕೆ ಬಲವಾದ ಅಡಿಪಾಯವಾಗಿದೆ. ನಮ್ಮ ಗುರಿ ಸ್ಪಷ್ಟವಾಗಿದೆ - 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಮತ್ತು ಪ್ರಧಾನಿ ಮೋದಿಯವರ ಸಂಕಲ್ಪಗಳನ್ನು ಈಡೇರಿಸುವುದು" ಎಂದು ಅವರು ಹೇಳಿದ್ದಾರೆ.