ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಂತೆಯೇ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಮತ್ತು ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ (MNM)ಗೆ ಭಾರತೀಯ ಚುನಾವಣಾ ಆಯೋಗ ಗುರುವಾರ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.
ಟಿವಿಕೆ ಪಕ್ಷದ ಚಿಹ್ನೆ ಸಿಳ್ಳೆ ( Whistle) ಆದರೆ MNM ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ನೀಡಲಾಗಿದೆ.
ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಯ ಪ್ರಣಾಳಿಕೆ ರೂಪಿಸಲು ಟಿವಿಕೆ ಮಂಗಳವಾರ ಚೆನ್ನೈನಲ್ಲಿ ತನ್ನ ಮೊದಲ ಚುನಾವಣಾ ಪ್ರಚಾರ ಸಮಿತಿ ಸಭೆ ನಡೆಸಿತ್ತು. ಇದಾದ ಎರಡು ದಿನಗಳಲ್ಲಿ ಇದೀಗ ಚುನಾವಣಾ ಆಯೋಗದಿಂದ ಚುನಾವಣಾ ಚಿಹ್ನೆ ಪಡೆದುಕೊಂಡಿದೆ.
ಮುಂಬರುವ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಗಳಿಗೆ ಮಾತ್ರ ಆಯಾ ಪಕ್ಷಗಳಿಗೆ ಸಾಮಾನ್ಯ ಚಿಹ್ನೆಯನ್ನು ನೀಡಲಾಗಿದೆ. ಆಯಾ ಪಕ್ಷ(ಗಳು) ಚುನಾವಣೆಯ ನಂತರ ಸಾಮಾನ್ಯ ಚಿಹ್ನೆಯನ್ನು ಬಳಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.