ನವದೆಹಲಿ: ಮಂಡ್ಯದಲ್ಲಿ ವಿಶ್ವದ ಅತಿದೊಡ್ಡ ಉಚಿತ ಗ್ರಂಥಾಲಯವನ್ನು ಸ್ಥಾಪಿಸಿದ ಮಾಜಿ ಬಸ್ ಕಂಡಕ್ಟರ್, ಪುಸ್ತಕ ಪ್ರೇಮಿ ಅಂಕೇಗೌಡ ಸೇರಿದಂತೆ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 45 ಮಂದಿಯನ್ನು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಬಸ್ ಕಂಡಕ್ಟರ್ ಆಗಿದ್ದ ಅಂಕೇಗೌಡ ಅವರು, ಪುಸ್ತಕಗಳೇ ತಮ್ಮ ಪ್ರಪಂಚ ಎಂದುಕೊಂಡು 20 ಭಾಷೆಗಳಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಪುಸ್ತಕಗಳು ಇರುವ ವಿಶ್ವದ ಅತಿದೊಡ್ಡ ಉಚಿತ-ಪ್ರವೇಶದ ಗ್ರಂಥಾಲಯವಾದ ‘ಪುಸ್ತಕ ಮನೆ’ ಅನ್ನು ಸ್ಥಾಪಿಸಿದ್ದಾರೆ.
ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ 'ಪುಸ್ತಕದ ಮನೆ'ಯನ್ನು ಸಾರ್ವಜನಿಕರಿಗಾಗಿ ತೆರೆದಿಟ್ಟಿರುವ ಎಂ. ಅಂಕೇಗೌಡರು, ಪುಸ್ತಕ ಅಲ್ಲದೇ ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹವನ್ನು ಹೊಂದಿದ್ದಾರೆ.
ತಮ್ಮ ಸಂಬಳದ ಬಹುಪಾಲು ಪುಸ್ತಕಗಳಿಗೇ ಮೀಸಲಿಟ್ಟು, ಪುಸ್ತಕ ಸಂಗ್ರಹಕ್ಕಾಗಿ ನಿವೇಶನವನ್ನೂ ಮಾರಿದ ಅಂಕೇಗೌಡರು, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗೆ ಸ್ಫೂರ್ತಿಯಾಗಿದ್ದಾರೆ. ಉದ್ಯಮಿ ಹರಿ ಕೋಡೆ ಅವರು ನಿರ್ಮಿಸಿಕೊಟ್ಟಿರುವ ಈ ಪುಸ್ತಕದ ಮನೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದೆ. ದೇಶದಾದ್ಯಂತ ಕಲಿಯುವವರನ್ನು ಸಬಲೀಕರಣಗೊಳಿಸುವ ಅವರ ಅನನ್ಯ ಪ್ರಯತ್ನಕ್ಕಾಗಿ ಈ ಬಾರಿಯ ಪದ್ಮಶ್ರೀಗೆ ಆಯ್ಕೆ ಮಾಡಲಾಗಿದೆ.
ಅಂಕೇಗೌಡ ಅವರಲ್ಲದೇ ಏಷ್ಯಾದ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪಿಸಿದ ಮುಂಬೈ ಮೂಲದ ಶಿಶುವೈದ್ಯೆ ಅರ್ಮಿದಾ ಫೆರ್ನಾಂಡಿಸ್, ಮಧ್ಯಪ್ರದೇಶದ ಬುಂದೇಲಿ ಯುದ್ಧ ಕಲಾ ತರಬೇತುದಾರ ಭಗವಾನದಾಸ್ ರೈಕ್ವಾರ್, ವಿಶಿಷ್ಟ ವಾದಕ ತಯಾರಕ 90 ವರ್ಷದ ಮಹಾರಾಷ್ಟ್ರದ ಭಿಕ್ಲ್ಯಾ ಲಡಾಕ್ಯ ದಿಂಡಾ ಮತ್ತಿತರರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.