ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಸಮರ ಸಾರಿದ್ದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಚುನಾವಣಾ ಆಯೋಗ ಶಾಕ್ ನೀಡಿದ್ದು, ದೀದಿ ಸರ್ಕಾರದ ಸಚಿವೆಗೆ ನೋಟಿಸ್ ನೀಡಿದೆ.
ಪಶ್ಚಿಮ ಬಂಗಾಳ ಸಚಿವೆ ಶಶಿ ಪಂಜಾ ಅವರು ಭಾನುವಾರ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ವಿಚಾರಣೆಯ ನೋಟಿಸ್ ಸ್ವೀಕರಿಸಿದ್ದಾರೆ. ಭಾನುವಾರ ಮಧ್ಯಾಹ್ನ SIR ವಿಚಾರಣೆಗೆ ಹಾಜರಾಗಲು ಸಚಿವರನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ತರಾತುರಿ, ಸಿದ್ಧತೆ ಗಳಿಲ್ಲದ ಕಾರ್ಯಾಚರಣೆ
ಇನ್ನು ಚುನಾವಣಾ ಆಯೋಗದ ನೋಟಿಸ್ ಕುರಿತು ಪ್ರತಿಕ್ರಿಯೆ ನೀಡಿರುವ ಬಂಗಾಳ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಪಂಜಾ ಅವರು SIR ಅನ್ನು ಟೀಕಿಸಿದ್ದಾರೆ.
"ತರಾತುರಿಯಲ್ಲಿ ಮತ್ತು ಸಾಕಷ್ಟು ಸಿದ್ಧತೆ ಇಲ್ಲದೆ" ನಡೆಸಲಾಗುತ್ತಿದೆ. 2002 ರಲ್ಲಿ ರಾಜ್ಯದಲ್ಲಿ ಕೊನೆಯ SIR ನಡೆಸಿದಾಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲಾಗಿತ್ತು. "ಅನ್‌ಮ್ಯಾಪ್ಡ್" ಎಂದು ಗುರುತಿಸಲಾಗಿರುವುದರಿಂದ ನೋಟಿಸ್ ನೀಡಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
"ನನ್ನ ಹೆಸರು 2002 ರ ಮತದಾರರ ಪಟ್ಟಿಯಲ್ಲಿತ್ತು. SIR ಪ್ರಕ್ರಿಯೆಯ ಸಮಯದಲ್ಲಿ ನಾನು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ, ಆದರೆ ನನ್ನ ಹೆಸರು ಅನ್‌ಮ್ಯಾಪ್ಡ್ ಎಂದು ತೋರಿಸುತ್ತಿದೆ. ಇದು ಖಂಡಿತವಾಗಿಯೂ ನನ್ನ ತಪ್ಪಲ್ಲ. ಇದು (ನೋಟಿಸ್) ನನ್ನ ಹೋರಾಟದ ಪ್ರತಿಫಲವಾಗಿದೆ" ಬಂಗಾಳದಲ್ಲಿ ಅನೇಕ ಜನರು ಇದರಿಂದಾಗಿ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಅಂತೆಯೇ ಈ ಪ್ರಕ್ರಿಯೆಯ ಸಮಯದಲ್ಲಿ ಸಚಿವೆಯಾಗಿ ಯಾವುದೇ ಸವಲತ್ತುಗಳನ್ನು ಪಡೆಯುವುದಿಲ್ಲ ಮತ್ತು ವಿಚಾರಣೆಗೆ ಹಾಜರಾಗಲು ಸಿದ್ಧಳಿದ್ದೇನೆ ಎಂದು ಪಂಜಾ ಹೇಳಿದರು.
ಟಿಎಂಸಿ ನಾಯಕ ದೇಬಾಂಗ್ಶು ಭಟ್ಟಾಚಾರ್ಯ ಅವರು ಮತ್ತು ಅವರ ಕುಟುಂಬ ಸದಸ್ಯರಿಗೆ SIR ನೋಟಿಸ್‌ಗಳು ಬಂದಿವೆ ಎಂದು ಹೇಳಿದರು.