ನವದೆಹಲಿ: ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಿದರು.
ಇಂದು ಬೆಳಗ್ಗೆ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮೋದಿ ಮತ್ತು ಇತರ ಗಣ್ಯರು ಮೆರವಣಿಗೆಯನ್ನು ವೀಕ್ಷಿಸಲು ಕರ್ತವ್ಯ ಪಥದಲ್ಲಿನ ವೇದಿಕೆಗೆ ತೆರಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಅವರು ಆಗಮಿಸಿದ ವೇಳೆ ರಾಷ್ಟ್ರಪತಿಗಳ ಅಂಗರಕ್ಷಕರು ಬೆಂಗಾವಲು ನೀಡಿದ್ದಾರೆ. ರಾಷ್ಟ್ರಪತಿಗಳ ಅಂಗರಕ್ಷಕ ಭಾರತೀಯ ಸೇನೆಯ ಅತ್ಯಂತ ಹಿರಿಯ ರೆಜಿಮೆಂಟ್ ಆಗಿದೆ. ಅಂಗರಕ್ಷಕ್ 1773 ರಲ್ಲಿ ಸ್ಥಾಪನೆಯಾದಾಗಿನಿಂದ 252 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ.
ಈ ಬಾರಿಯ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ 150 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಗಣತಂತ್ರ ದಿನವನ್ನು ಅದೇ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದೆ. ಬೆಳಿಗ್ಗೆ 10.30ಕ್ಕೆ ಕರ್ತವ್ಯಪಥದಲ್ಲಿ ಪಥಸಂಚಲನ ಪ್ರಾರಂಭವಾಗಿದ್ದು, ಸುಮಾರು 90 ನಿಮಿಷಗಳ ಕಾಲ ಪರೇಡ್ ನಡೆಯಲಿದೆ.
18 ಕವಾಯತುಗಳ ಪ್ರದರ್ಶನ, 13 ಮಿಲಿಟರಿ ಬ್ಯಾಂಡ್‌ಗಳು ಭಾಗಿಯಾಗಲಿವೆ. 2500 ಕಲಾವಿದರು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. 10,000 ಅತಿಥಿಗಳು ಭಾಗಿಯಾಗಲಿದ್ದಾರೆ. ಪ್ರಾಣಿಗಳ ಪಡೆಯೂ ಮೊದಲ ಬಾರಿ ಸೇರ್ಪಡೆಗೊಳ್ಳಲಿದೆ.
ವಂದೇ ಮಾತರಂ ಮತ್ತು ಆತ್ಮನಿರ್ಭರ ಕಲ್ಪನೆಯಲ್ಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೊಗಳು ಕರ್ತವ್ಯಪಥದಲ್ಲಿ ಸಾಗಲಿವೆ. 17 ರಾಜ್ಯಗಳ ಹಾಗೂ 13 ಸಚಿವಾಲಯಗಳ ಪ್ರದರ್ಶ ನವಿರಲಿವೆ. ಆಪರೇಷನ್ ಸಿಂದೂರದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಆಗಿರು ವುದರಿಂದ ಈ ಬಾರಿ ಪರೇಡ್‌ನಲ್ಲಿ ಆಪರೇಷನ್ ಸಿಂದೂರ್: ವಿಕ್ಟರಿ ಥ್ ಜಾಯಿಂಟ್‌ನೆಸ್' ಎಂಬ ಶೀರ್ಷಿಕೆಯಲ್ಲಿ ಸೇನೆ ಟ್ಯಾಬ್ಲೊ ಪ್ರದರ್ಶಿಸಲಿದೆ.
ಕರ್ತವ್ಯ ಪಥದಲ್ಲಿ ನಡೆಯುವ ಗಣ ರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಭಾಗಿಯಾಗದಿದ್ದರೂ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ 'ಸಿರಿಧಾನ್ಯದಿಂದ ಮೈಕ್ರೋಚಿಪ್ 'ವರೆಗೆ (ಮಿಲೆಟ್ ಟು ಮೈಕ್ರೋ ಚಿಪ್) ಎಂಬ ಸ್ಥಬ್ದಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಕೃಷಿಯಿಂದ ಕೈಗಾರಿಕೆ ವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಪಯಣವನ್ನು ಪ್ರದರ್ಶಿಸಲಿದೆ.